ವಾಣಿಜ್ಯ

ಪೇಟಿಎಂ ನಿಂದ ಪೇಮೆಂಟ್ಸ್ ಬ್ಯಾಂಕ್ ಪ್ರಾರಂಭ: ಠೇವಣಿ ಮೇಲೆ ಶೇ.4 ರಷ್ಟು ಬಡ್ಡಿದರ, ಕ್ಯಾಶ್ ಬ್ಯಾಕ್ ಆಫರ್

Srinivas Rao BV
ನವದೆಹಲಿ: 2020 ರ ವೇಳೆಗೆ 500 ಮಿಲಿಯನ್ ಗ್ರಾಹಕರನ್ನು ಹೊಂದುವ ಗುರಿಯೊಂದಿಗೆ ಡಿಜಿಟಲ್ ಪೇಮೆಂಟ್ ಸಂಸ್ಥೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ನ್ನು ಪ್ರಾರಂಭಿಸಿದ್ದು, ಠೇವಣಿ ಮೇಲೆ ವಾರ್ಷಿಕ ಶೇ.4 ರಷ್ಟು ಬಡ್ಡಿ ನೀಡುವುದು ಹಾಗೂ ಕ್ಯಾಶ್ ಬ್ಯಾಕ್ ಆಫರ್, ಉಚಿತ ಆನ್ ಲೈನ್ ವಹಿವಾಟು ಸೇರಿದಂತೆ ಆಕರ್ಷಕ ಸೌಲಭ್ಯಗಳನ್ನು ಘೋಷಿಸಿದೆ. 
ಚೀನಾದ ಆಲಿಬಾಬಾ ಹಾಗೂ ಜಪಾನ್ ನ ಕಾಂಗ್ಲೋಮೆರೇಟ್ ಸಾಫ್ಟ್ ಬ್ಯಾಂಕ್ ನ ಸಹಭಾಗಿತ್ವ ಹೊಂದಿರುವ ಪೇಟಿಎಂ ಪೇಮೆಂಟ್ ಬ್ಯಾಂಕ್ ನ ನೆಟ್ವರ್ಕ್ ನ್ನು ನಿರ್ಮಿಸಲು ಮುಂದಿನ 2 ವರ್ಷಗಳಿಗೆ 400 ಕೋಟಿಯನ್ನು ಹೂಡಲಿದೆ.  ಭಾರತದಲ್ಲಿ ಏರ್ ಟೆಲ್ ಹಾಗೂ ಇಂಡಿಯಾ ಪೋಸ್ಟ್ ನ ನಂತರ ಪೇಮೆಂಟ್ಸ್ ಬ್ಯಾಂಕ್ ನ್ನು ಪ್ರಾರಂಭಿಸುತ್ತಿರುವ ಮೂರನೇ ಸಂಸ್ಥೆ ಪೇಟಿಎಂ ಆಗಿದೆ. 
ವಿಶ್ವದಲ್ಲೇ ವಿನೂತನ ಬ್ಯಾಂಕಿಂಗ್ ಮಾಡೆಲ್ ನ್ನು ಪರಿಚಯಿಸಲು ಆರ್ ಬಿಐ ನಮಗೆ ಅವಕಾಶ ನೀಡಿದೆ. ಗ್ರಾಹಕರ ಠೇವಣಿಯನ್ನು ಸರ್ಕಾರಿ ಬಾಂಡ್ ಗಳಲ್ಲಿ ಸುರಕ್ಷಿತವಾಗಿ ಹೂಡಿಕೆ ಮಾಡಿ ದೇಶ ನಿರ್ಮಾಣಕ್ಕೆ ಸಹಕರಿಸುತ್ತೆವೆ ಎಂದು ಪೇಟಿಎಂ ನ ಪೇಮೆಂಟ್ಸ್ ಬ್ಯಾಂಕ್ ಅಧ್ಯಕ್ಷ ವಿಜಯ್ ಶೇಖರ್ ಶರ್ಮಾ ಹೇಳಿದ್ದಾರೆ. 
ಪೇಟಿಎಂ ಸಂಸ್ಥೆ ಪ್ರಸ್ತುತ 220 ಡಿಜಿಟಲ್ ವಾಲೆಟ್ ನ್ನು ಬಳಕೆ ಮಾಡುವ ಗ್ರಾಹಕರನ್ನು ಹೊಂದಿದೆ. ಡಿಜಿಟಲ್ ವಾಲೆಟ್ ಗಳನ್ನು ಪೇಮೆಂಟ್ಸ್ ಬ್ಯಾಂಕ್ ಗೆ ವರ್ಗಾವಣೆ ಮಾಡಲಾಗುತ್ತದೆ. ನಂತರ ಗ್ರಾಹಕರು ಬ್ಯಾಂಕ್ ಖಾತೆಯನ್ನು ತೆರೆಯಬೇಕಾದರೆ ಕೆವೈಸಿ(ನಿಮ್ಮ ಗ್ರಾಹಕರನ್ನು ಅರಿಯಿರಿ-ಕೆವೈಸಿ) ನಿಯಮಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. ದೇಶಾದ್ಯಂತ ಇದಕ್ಕಾಗಿ ಕೆವೈಸಿ ಕೇಂದ್ರಗಳನ್ನು ತೆರೆಯಲಾಗುತ್ತದೆ ಎಂದು ಪೇಟಿಎಂ ತಿಳಿಸಿದೆ. 
ಮೊದಲ ಹಂತದಲ್ಲಿ ಆಹ್ವಾನದ ಆಧಾರದಲ್ಲಿ ಮಾತ್ರ ಪೇಟಿಎಂ ನಲ್ಲಿ ಖಾತೆ ತೆರಯಬಹುದಾಗಿದೆ. ಪೇಟಿಎಂ ನ ಉದ್ಯೋಗಿಗಳಿಗೆ ಸಂಸ್ಥೆ ಬೀಟಾ ಬ್ಯಾಂಕಿಂಗ್ ಆಪ್ ನ್ನು ಪರಿಚಯಿಸಲಿದ್ದು 2020 ರ ವೇಳೆಗೆ 500 ಮಿಲಿಯನ್ ಭಾರತೀಯರನ್ನು ಗ್ರಾಹಕರನ್ನಾಗಿಸಿಕೊಳ್ಳುವುದು ಪೇಮೆಂಟ್ಸ್ ಬ್ಯಾಂಕ್ ನ ಗುರಿಯಾಗಿದೆ. 
ಗ್ರಾಹಕರು ತಮ್ಮ ಖಾತೆಗೆ 25,000 ರೂಪಾಯಿ ಠೇವಣಿ ಮಾಡುತ್ತಿದ್ದಂತೆಯೇ ಅವರಿಗೆ 250 ರೂಪಾಯಿ ಕ್ಯಾಶ್ ಬ್ಯಾಕ್ ನೀಡಲಾಗುತ್ತದೆ ಹಾಗೂ ಜಿರೋ ಬ್ಯಾಲೆನ್ಸ್, ಉಚಿತ ದರದಲ್ಲಿ ಆನ್ ಲೈನ್ ವಹಿವಾಟುಗಳ ಸೌಲಭ್ಯವನ್ನೂ ಒದಗಿಸಲಾಗುತ್ತದೆ ಎಂದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.
SCROLL FOR NEXT