ವಾಣಿಜ್ಯ

ಹೆಚ್ 1ಬಿ ವೀಸಾ ನಿಯಮ ಎಫೆಕ್ಟ್; 10 ಸಾವಿರ ಅಮೆರಿಕನ್ನರ ನೇಮಕಾತಿಗೆ ಮುಂದಾದ ಇನ್ಫೋಸಿಸ್!

Srinivasamurthy VN

ಸ್ಯಾನ್ ಫ್ರಾನ್ಸಿಸ್ಕೋ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಧಿಕಾರಕ್ಕೆ ಬಂದ ಬಳಿಕ ಹೆಚ್ 1ಬಿ ವೀಸಾ ನಿಯಮಗಳಲ್ಲಿನ ಬದಲಾವಣೆಯ ಪರಿಣಾಮ ಎದುರಿಸಲು ಇನ್ಫೋಸಿಸ್ ಸಿದ್ಧತೆ ನಡೆಸಿಕೊಂಡಿದ್ದು, ಬರೊಬ್ಬರಿ 10  ಸಾವಿರ ಮಂದಿ ಅಮೆರಿಕನ್ನರಿಗೆ ಉದ್ಯೋಗ ನೀಡಲು ಮುಂದಾಗಿದೆ.

ಮುಂದಿನ 2 ವರ್ಷಗಳ ಅವಧಿಯಲ್ಲಿ 10 ಸಾವಿರ ಅಮೆರಿಕನ್ನರನ್ನು ನೇಮಿಸಿಕೊಳ್ಳಲು ಇನ್ಫೋಸಿಸ್ ಸಂಸ್ಥೆ ನಿರ್ಧರಿಸಿದ್ದು, ಕೇವಲ ನುರಿತ ತಜ್ಞರು ಮಾತ್ರರಲ್ಲದೇ ಈಗಾಷ್ಟೇ ಕಾಲೇಜು ವ್ಯಾಸಂಗ ಪೂರ್ಣಗೊಳಿಸಿರುವ  ವಿದ್ಯಾರ್ಥಿಗಳನ್ನೂ ಕೆಲಸ ನೀಡಿ ಅವರಿಗೆ ತರಬೇತಿ ನೀಡಲಾಗುತ್ತದೆ ಎಂದು ಇನ್ಫೋಸಿಸ್ ಸಂಸ್ಥೆ ತಿಳಿಸಿದೆ. ಹೆಚ್ 1ಬಿ ವೀಸಾ ನಿಯಮ ಬದಲಾವಣೆ ಬಳಿಕ ಭಾರತೀಯ ಮೂಲದ ತಂತ್ರಜ್ಞಾನ ಸಂಸ್ಥೆ ಇನ್ಫೋಸಿಸ್ ಗೆ ಭಾರಿ  ಪ್ರಮಾಣದ ಉದ್ಯೋಗಿಗಳ ಕೊರತೆ ಎದುರಾಗಿದ್ದು, ಇದನ್ನು ನೀಗಿಸಲು ಈ ಮಹತ್ವದ ಕ್ರಮಕ್ಕೆಮುಂದಾಗಿದೆ.

ಅಂತೆಯೇ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಇಂಡಿಯಾನಾ ಪೊಲೀಸ್ ನಲ್ಲಿ ಸುಮಾರು 35 ಸಾವಿರ ಚದರ ಅಡಿ ಭೂಪ್ರದೇಶದಲ್ಲಿ ತರಬೇತಿ ಕೇಂದ್ರ ನಿರ್ಮಾಣ ಮಾಡಲೂ ಇನ್ಫೋಸಿಸ್ ನಿರ್ಧರಿಸಿದೆ. ಇಲ್ಲಿ ನುರಿತ ವೃತ್ತಿಪರ  ನೌಕರರು ಮಾತ್ರವಲ್ಲದೇ ವಿದ್ಯಾರ್ಥಿಗಳಿಗೂ ತರಬೇತಿ ನೀಡಲಾಗುತ್ತದೆ. ಈ ಬಗ್ಗೆ ಸಂಸ್ಥೆಯ ಉಪ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವಿ ಕುಮಾರ್ ಅವರು ಮಾಹಿತಿ ನೀಡಿದ್ದು, 8ರಿಂದ 10 ವಾರಗಳ ಕಾಲ ತರಬೇತಿ  ಕಾರ್ಯಕ್ರಮಗಳಿರುತ್ತವೆ. ದತ್ತಾಂಶ ಪರಿಶೀಲನೆ, ಎಂಟರ್ ಪ್ರೈಸ್ ಕ್ಲೌಡ್ ಅಪ್ಲಿಕೇಶನ್ ಮತ್ತು ಸೈಬರ್ ಸೆಕ್ಯೂರಿಟಿ ಕುರಿತ ಮಾಹಿತಿಗಳನ್ನು ತರಬೇತಿ ವೇಳೆ ವಿವಿಧ ಸ್ತರಗಳಲ್ಲಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಅಂತೆಯೇ ಸಂಸ್ಥೆಯ ಹೊಸ ನಿರ್ಧಾರಗಳಿಂದಾಗಿ ಸಂಸ್ಥೆಯ ಕಾರ್ಯ ನಿರ್ವಹಣೆ ಮೇಲೆ ಯಾವುದೇ ರೀತಿಯ ಅಡ್ಡ ಪರಿಣಾಮ ಬೀರುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

SCROLL FOR NEXT