ವಾಣಿಜ್ಯ

70 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮನೆಬಾಗಿಲಿಗೆ ಸೇವೆ ನೀಡಿ: ಬ್ಯಾಂಕುಗಳಿಗೆ ಆರ್ ಬಿಐ

Sumana Upadhyaya
ಮುಂಬೈ: 70 ವರ್ಷಕ್ಕಿಂತ ಅಧಿಕ ವಯೋವೃದ್ಧರು ಮತ್ತು ವಿಶೇಷ ಚೇತನರಿಗೆ ಬ್ಯಾಂಕಿನ ಮೂಲ ಸೇವೆಗಳನ್ನು ಅವರ ಮನೆ ಬಾಗಿಲಿಗೆ ಒದಗಿಸಬೇಕೆಂದು ಆರ್ ಬಿಐ ಬ್ಯಾಂಕ್ ಗಳಿಗೆ ನಿರ್ದೇಶನ ನೀಡಿದೆ. ಈ ವರ್ಷಾಂತ್ಯದೊಳಗೆ ಸೇವೆಯನ್ನು ಜಾರಿಗೆ ತರಬೇಕೆಂದು ಆರ್ ಬಿಐ ಬ್ಯಾಂಕ್ ಗಳಿಗೆ ಸೂಚನೆ ನೀಡಿದೆ.
ಹಿರಿಯ ನಾಗರಿಕರು ಮತ್ತು ದೃಷ್ಟಿ ದೋಷವುಳ್ಳವರು ಸೇರಿದಂತೆ ವಿಶೇಷ ಚೇತನರಿಗೆ ಬ್ಯಾಂಕ್ ನ ಮೂಲ ಸೇವೆಗಳನ್ನು ಅವರ ಮನೆ ಬಾಗಿಲಿಗೆ ಒದಗಿಸಬೇಕು. ಅಂದರೆ ವಯೋವೃದ್ಧರನ್ನು ಮತ್ತು ವಿಶೇಷ ಚೇತನರನ್ನು ಕರೆದುಕೊಂಡು ಹೋಗುವುದು, ನಗದು ನೀಡುವುದು, ಚೆಕ್ ಪುಸ್ತಕ ಮತ್ತು ಡಿಡಿಗಳನ್ನು ಮನೆಗೆ ಒದಗಿಸುವುದು ಇತ್ಯಾದಿ ಸೇವೆಗಳನ್ನು ನೀಡುವುದಾಗಿದೆ. 
 ಬ್ಯಾಂಕಿನ ಕೆಲವು ಶಾಖೆಗಳಲ್ಲಿ ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರಿಗೆ ಬ್ಯಾಂಕ್ ಸೇವೆಗಳನ್ನು ಪಡೆದುಕೊಳ್ಳಲು ಕಷ್ಟವಾಗುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಈ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ಆರ್ ಬಿಐ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ. ಇದು ಸಣ್ಣ ಫೈನಾನ್ಸ್ ಮತ್ತು ಪೇಮೆಂಟ್ ಬ್ಯಾಂಕುಗಳಿಗೆ ಕೂಡ ಅನ್ವಯವಾಗುತ್ತದೆ.
ಈ ವರ್ಷದ ಡಿಸೆಂಬರ್ 31ರೊಳಗೆ ಈ ಸೌಲಭ್ಯ ಜಾರಿಗೆ ತರಬೇಕು. ಈ ಬಗ್ಗೆ ಬ್ಯಾಂಕಿನ ಶಾಖೆಗಳಲ್ಲಿ ಮತ್ತು ಶಾಖೆಗಳಲ್ಲಿ ಪ್ರಚಾರ ನೀಡಬೇಕು ಎಂದು ಆರ್ ಬಿಐ ಎಲ್ಲಾ ಬ್ಯಾಂಕುಗಳಿಗೆ ಆದೇಶ ನೀಡಿದೆ.  ಬ್ಯಾಂಕುಗಳು ಹಿರಿಯ ನಾಗರಿಕರಿಗೆ ಮತ್ತು ವಿಶೇಷ ಚೇತನರಿಗೆ ಹೆಚ್ಚು ಅನುಕೂಲ ಮಾಡಿಕೊಡಲು ಹಲವು ಕ್ರಮಗಳನ್ನು ತಿಳಿಸಿದೆ.
ಉಳಿತಾಯ ಖಾತೆ ಹೊಂದಿರುವವರಿಗೆ ಪ್ರತಿ ವರ್ಷ ಉಚಿತವಾಗಿ 25 ಚೆಕ್ ಲೀವ್ಸ್ ನೀಡುವಂತೆ ಆರ್ ಬಿಐ ಬ್ಯಾಂಕುಗಳಿಗೆ ಸೂಚಿಸಿದೆ. ಚೆಕ್ ಬುಕ್ ಗಳನ್ನು ಪಡೆದುಕೊಳ್ಳಲು ಹಿರಿಯ ನಾಗರಿಕರು ಸೇರಿದಂತೆ ಯಾವುದೇ ಗ್ರಾಹಕರು ಹಾಜರಾಗಬೇಕೆಂದು ಬ್ಯಾಂಕುಗಳು ಒತ್ತಾಯಿಸಬಾರದು ಎಂದು ಕೂಡ ಆರ್ ಬಿಐ ಸೂಚಿಸಿದೆ. 
SCROLL FOR NEXT