ವಾಣಿಜ್ಯ

ಹೆಸರಿನ ಜೊತೆ ಬ್ಯಾಂಕ್ ಎಂದು ಸೇರಿಸದಂತೆ ಸಹಕಾರ ಸಂಘಗಳಿಗೆ ರಿಸರ್ವ್ ಬ್ಯಾಂಕ್ ಸೂಚನೆ

Sumana Upadhyaya
ಮುಂಬೈ: ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ ಉಲ್ಲಂಘನೆಯಾಗುವುದರಿಂದ ಸಹಕಾರ ಸಂಘಗಳು, ಬ್ಯಾಂಕ್ ಎಂಬ ಹೆಸರನ್ನು ಬಳಸಬಾರದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.
ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಸಾಧ್ಯತೆಗಳಿಗೆ ವಿರುದ್ಧವಾಗಿ ಕೆಲವು ಸಹಕಾರ ಸಂಘಗಳು ಬ್ಯಾಂಕಿಂಗ್ ವ್ಯವಹಾರ ನಡೆಸುವುದು, ಗ್ರಾಹಕರಿಂದ ಠೇವಣಿಗಳನ್ನು ಸ್ವೀಕರಿಸುವುದು ಕಂಡುಬಂದಿದೆ ಎಂದು ಆರ್ ಬಿಐ ಹೇಳಿದೆ.
ಕೆಲವು ಸಹಕಾರಿ ಸಂಘಗಳು ತಮ್ಮ ಹೆಸರಿನ ಜೊತೆಗೆ ಬ್ಯಾಂಕ್ ಎಂಬ ಶಬ್ದವನ್ನು ಬಳಸುವುದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗಮನಕ್ಕೆ ಬಂದಿದೆ. ಇದು ಬ್ಯಾಂಕ್ ನಿಯಂತ್ರಣ ಕಾಯಿದೆ 1949ರ ಸೆಕ್ಷನ್ 7ರಡಿಯಲ್ಲಿ ಉಲ್ಲಂಘನೆಯಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.
ಇಂತಹ ಸಂಘಗಳಿಗೆ ಬ್ಯಾಂಕ್ ನಿಯಂತ್ರಣ ಕಾಯಿದೆಯಡಿ ಯಾವುದೇ ಅನುಮತಿ ನೀಡಿರುವುದಿಲ್ಲ ಅಥವಾ ಬ್ಯಾಂಕಿಂಗ್ ವಹಿವಾಟು ನಡೆಸಲು ಆರ್ ಬಿಐನಿಂದ ಅನುಮತಿ ಪಡೆದಿರುವ ಅಧಿಕೃತ ಬ್ಯಾಂಕ್ ಆಗಿರುವುದಿಲ್ಲ. 
ಇಂತಹ ಸಂಘಗಳಲ್ಲಿ ಇಟ್ಟ ಠೇವಣಿಗಳಿಗೆ ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಸಿಜಿಸಿ)ನಿಂದ ವಿಮೆ ಸೌಲಭ್ಯ ಸಿಗುವುದಿಲ್ಲ ಎಂದು ಆರ್ ಬಿಐ ಹೇಳಿದೆ.
ಸಾರ್ವಜನಿಕರು ಇಂತಹ ಸಹಕಾರಿ ಸಂಘಗಳಲ್ಲಿ ವ್ಯವಹಾರ ನಡೆಸುವಾಗ ಜಾಗರೂಕತೆಯಿಂದ ವರ್ತಿಸಬೇಕೆಂದು ರಿಸರ್ವ್ ಬ್ಯಾಂಕ್ ಹೇಳಿದೆ.
SCROLL FOR NEXT