ಏರ್ ಟೆಲ್ ನೊಂದಿಗೆ ಟಾಟಾ ಟೆಲಿ ಸರ್ವೀಸ್ ವಿಲೀನ
ಮುಂಬಯಿ: ಟಾಟಾ ಸಮೂಹದ ಟಾಟಾ ಟೆಲೆಸರ್ವಿಸಸ್ ಮೊಬೈಲ್ ಸೇವಾ ಸಂಸ್ಥೆ ದೇಶದ ಅತಿದೊಡ್ಡ ಟೆಲಿಕಾಂ ಸಂಸ್ಥೆಯಾದ ಭಾರ್ತಿ ಏರ್ಟೆಲ್ ಲಿಮಿಟೆಡ್ ನಲ್ಲಿ ವಿಲೀನವಾಗಿದೆ. ಈ ಮೂಲಕ ಭಾರತ ಮಾರುಕಟ್ಟೆಯಲ್ಲಿ ವ್ಯಾಪಿಸುತ್ತಿರುವ ಜಿಯೋ ಪ್ರಭಾವವನ್ನು ಎದುರಿಸಲು ಏರ್ ಟೆಲ್ ಮುಂದಾಗಿದೆ.
ಲೆಸರ್ವಿಸಸ್ ಲಿಮಿಟೆಡ್ (ಟಿಟಿಎಂಎಲ್) ಮತ್ತು ಟಾಟಾ ಟೆಲಿಸರ್ವಿಸಸ್ ಮಹಾರಾಷ್ಟ್ರ ಲಿಮಿಟೆಡ್‌ನ (ಟಿಟಿಎಂಎಲ್) ಗಳನ್ನು ಏರ್ ಟೆಲ್ ನೊಂದಿಗೆ ವಿಲೀನಗೊಳಿಸಲಾಗಿದೆ.
ಆದರೆ ಈ ವಿಲೀನ ಪ್ರಕ್ರಿಯೆಯಲ್ಲಿ ಏರ್ ಟೆಲ್, ಟಾಟಾ ಟೆಲಿ ಸರ್ವೀಸ್ ನ 40 ಸಾವಿರ ಕೋಟಿ ರೂ. ಸಾಲ ತೀರಿಸುವ ಅಥವಾ ಖರೀದಿಗೆ ನಗದು ಪಾವತಿಸುವ ಪ್ರಸ್ತಾವ ಇರುವುದಿಲ್ಲ.. ಹೀಗಾಗಿ ಏರ್ ಟೆಲ್ ಪಾಲಿಗೆ ಈ ಸ್ವಾಧೀನ ಪ್ರಕ್ರಿಯೆ ಅತ್ಯಂತ ಸುಲಭವಾಗಿದೆ. ತರಂಗಾಂತರಗಳ ಖರೀದಿಗಾಗಿ ಪಾವತಿಸಬೇಕಾದ 10 ಸಾವಿರ ಕೋಟಿ ರೂ. ನ್ನು ಸಹ ಟಾಟಾ ಸಂಸ್ಥೆಯೇ ಭರಿಸಲಿದೆ.
ವಿಲೀನದಿಂದಾಗಿ ಟಾಟಾ ಸಂಸ್ಥೆಯ 4 ಕೋಟಿ ಮೊಬೈಲ್ ಗ್ರಾಹಕರು ಏರ್ ಟೆಲ್ ನ ನೆಟ್ ವರ್ಕ್ ಅಡಿ ಬರಲಿದ್ದಾರೆ.
ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೊ, ಭಾರತದಲ್ಲಿ ತನ್ನ ಮಾರುಕಟ್ಟೆಯನ್ನು ಅತ್ಯಂತ ವೇಗದಲ್ಲಿ ವಿಸ್ತರಿಸಿಕೊಳ್ಳುತ್ತಿದೆ. ಬೆಲೆ ಸಮರದ ಮೂಲಕ ಎದುರಾಳಿ ಸಂಸ್ಥೆಗಳಿಗೆ ತೀವ್ರ ಪೈಪೋಟಿ ನಿಡಿದೆ. ಇದಕ್ಕೆ ಪ್ರತಿಯಾಗಿ ಏರ್ ಟೆಲ್ ಮತ್ತು ಟಾಟಾ ಟೆಲಿ ಸರ್ವೀಸ್ ವಿಲೀನವು ಭಾರತ ದೂರ ಸಂಪರ್ಕ ಮಾರುಕಟ್ಟೆಯಲ್ಲಿ ಒಂದು ಮಹತ್ವದ ವಿದ್ಯಮಾನವಾಗಲಿದೆ.
‘ಈ ವಿಲೀನ ಪ್ರಕ್ರಿಯೆಯಿಂದ ಮಾರುಕಟ್ಟೆಯಲ್ಲಿನ ನಮ್ಮ ಪಾಲು ಹೆಚ್ಚಲಿದೆ’ ಎಂದು ಭಾರ್ತಿ ಏರ್ ಟೆಲ್ ನ ಅಧ್ಯಕ್ಷ ಸುನೀಲ್ ಭಾರ್ತಿ ಪ್ರತಿಕ್ರಿಯಿಸಿದ್ದಾರೆ. ‘ಭಾರ್ತಿ ಏರ್‌ಟೆಲ್ ಜತೆಗಿನ ಈ ಒಪ್ಪಂದವು ಟಾಟಾ ಸಮೂಹ ಮತ್ತು ಅದರ ಪಾಲುದಾರರ ಪಾಲಿಗೆ ಉತ್ತಮ ಪರಿಹಾರವಾಗಿದೆ’ ಎಂದು ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಹೇಳಿದ್ದಾರೆ.
ಏರ್ ಟೆಲ್ ನ ಪ್ರತಿಸ್ಪರ್ಧಿ ವೊಡಾಫೋನ್ ಮತ್ತು ಐಡಿಯಾ ಸೆಲ್ಯುಲರ್ ಸಹ ವಿಲೀನಗೊಳ್ಳುವುದಾಗಿ ಇದಾಗಲೇ ಘೋಷಣೆ ಮಾಡಿವೆ.