ನವದೆಹಲಿ: ಭಾರತದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದ್ದು, ಆರ್ಥಿಕ ಸ್ಥಿತಿ ಭದ್ರವಾಗಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಆರ್ಥಿಕ ಸ್ಥಿತಿಯ ಬಗ್ಗೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಅರುಣ್ ಜೇಟ್ಲಿ, ಕಳೆದ ಮೂರು ವರ್ಷಗಳಿಂದ ದೇಶದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದ್ದು, ಹೆಚ್ಚು ಬೆಳವಣಿಗೆ ದರ ಕಾಯ್ದುಕೊಳ್ಳುವ ಪ್ರಯತ್ನ ನಿರಂತರವಾಗಿದೆ ಎಂದು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯ ವೇಳೆಯಲ್ಲೇ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಎಸ್ ಸಿ ಗರ್ಗ್, ಅರ್ಥವ್ಯವಸ್ಥೆಯ ಕುರಿತು ಪ್ರಸ್ತುತಿ ಪ್ರದರ್ಶಿಸಿದ್ದು, 2014 ರಿಂದ ಹಣದುಬ್ಬರ ದರ ಸತತ ಇಳಿಮುಖವಾಗಿದೆ ಹಾಗೂ ಪ್ರಸಕ್ತ ವರ್ಷದಲ್ಲಿ ಶೇ.4 ರಷ್ಟು ದಾಟುವುದಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಸ್ಥೂಲ ಆರ್ಥಿಕ ಅಂಶಗಳ ಬಗ್ಗೆಯೂ ಮಾಹಿತಿ ನೀಡಿರುವ ಗರ್ಗ್, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಚಾಲ್ತಿ ಖಾತೆಯ ಕೊರತೆ ಶೇ.2 ಕ್ಕಿಂತ ಕಡಿಮೆ ಇರಲಿದ್ದು, ವಿದೇಶಿ ವಿನಿಮಯ ಮೀಸಲು 400 ಬಿಲಿಯನ್ ನ್ನು ದಾಟಿದೆ ಎಂದು ತಿಳಿಸಿದ್ದಾರೆ. ಇನ್ನು ವಿತ್ತೀಯ ಕೊರತೆ ಬಗ್ಗೆಯೂ ಮಾತನಾಡಿರುವ ಗರ್ಗ್, ಪ್ರಸಕ್ತ ವರ್ಷದಲ್ಲಿ ಜಿಡಿಪಿಯ ಶೇ.3.2 ರಷ್ಟಕ್ಕೆ ಸೀಮಿತಗೊಳಿಸಲು ಗುರಿ ಹೊಂದಲಾಗಿದೆ, ಆದರೆ ಈ ಬಗ್ಗೆ ಡಿಸೆಂಬರ್ ನಲ್ಲಿ ಮತ್ತೊಮ್ಮೆ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಜಿಡಿಪಿ ಬೆಳವಣಿಗೆ ಕುಸಿದಿರುವುದರ ಬಗೆಗಿನ ಪ್ರಶ್ನೆಗೂ ಉತ್ತರ ನೀಡಿರುವ ಗರ್ಗ್, ಐಎಂಎಫ್ ನಿಂದ ಭಾರತದ ಆರ್ಥಿಕತೆ ಬಗ್ಗೆ ಸಕಾರಾತ್ಮಕವಾದ ಅಭಿಪ್ರಾಯ ವ್ಯಕ್ತವಾಗಿದ್ದು, ಶೇ.8 ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.