ಮುಂಬೈ: ಉಳಿತಾಯ ಠೇವಣಿ ಖಾತೆಗಳ ಮೇಲೆನ ಕನಿಷ್ಠ ಠೇವಣಿ ದಂಡದ ರೂಪವಾಗಿ 2 ಸಾವಿರ ಕೋಟಿ ರು.ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ಸೋಮವಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.
ಇತ್ತೀಚೆಗೆ ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಮಾಡುವ ಸಂಬಂಧ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ್ದು, ಈ ಪ್ರಕ್ರಿಯೆಗಾಗಿ ಸಾಕಷ್ಟು ಹಣ ವ್ಯಯವಾಗುತ್ತಿದೆ. ಹೀಗಾಗಿ ದಂಡದ ರೂಪದಲ್ಲಿ ಸಂಗ್ರಹಿಸಲಾಗುವ ಹಣವನ್ನು ಈ ಪ್ರಕ್ರಿಯೆಗೆ ಬಳಸಲಾಗುತ್ತದೆ ಎಂದು ಎಸ್ ಬಿಐ ನಿರ್ವಾಹಕ ನಿರ್ದೇಶಕ ರಜನೀಶ್ ಕುಮಾರ್ ಅವರು ಹೇಳಿದ್ದಾರೆ.
"ಡಿಸೆಂಬರ್ 31ರ ಒಳಗೆ ಎಲ್ಲ ಉಳಿತಾಯ ಖಾತೆಗಳಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದ್ದು, ಈ ಬಗ್ಗೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಪ್ರಕ್ರಿಯೆ ದುಬಾರಿ ಪ್ರಕ್ರಿಯೆಯಾಗಿದ್ದು, ಈ ಪ್ರಕ್ರಿಯೆಯಿಂದ ಬ್ಯಾಂಕ್ ಹೆಚ್ಚುವರಿ ಹೊರೆ ಬೀಳುತ್ತಿದೆ. ಹೀಗಾಗಿ ಪ್ರಸ್ತುತ ಉಳಿತಾಯ ಖಾತೆಗಳಲ್ಲಿನ ಕನಿಷ್ಠ ಠೇವಣಿ ಮೇಲಿನ ದಂಡದ ರೂಪದ ಹಣವನ್ನು ಈ ಪ್ರಕ್ರಿಯೆಗೂ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.
ಉಳಿತಾಯ ಖಾತೆಗಳ ಮೇಲಿನ ದಂಡದ ಹಣ, ಎಟಿಎಂ ನಿರ್ವಹಣೆ ವೆಚ್ಚ ಸೇರಿದಂತೆ ಗ್ರಾಹಕರಿಗೆ ವಿಧಿಸಲಾಗುವ ಇತರೆ ಶುಲ್ಕಗಳ ಸಂಗ್ರಹದ ಹಣವನ್ನು ಕೂಡ ಎಟಿಎಂ ನಿರ್ವಹಣೆ, ಸಿಬ್ಬಂದಿಗಳ ನಿರ್ವಹಣೆ ಸೇರಿದಂತೆ ವಿವಿಧ ಉದ್ದೇಶಗಳಿಗೆ ಬಳಸಲಾಗುತ್ತಿದೆ. ಇನ್ನು ಪ್ರತೀ ಖಾತೆಗೆ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆ ಸಾಮಾನ್ಯ ಪ್ರಕ್ರಿಯೆ ಏನೂ ಅಲ್ಲ. ಬ್ಯಾಂಕ್ ಸುಮಾರು 40 ಲಕ್ಷ ಖಾತೆಗಳನ್ನು ಕೂಲಂಕುಷವಾಗಿ ಪರಿಶೀಲಿಸಬೇಕಿರುತ್ತದೆ. ನಿಜಕ್ಕೂ ಇದೊಂದು ದುಬಾರಿ ಪ್ರಕ್ರಿಯೆ. ಪ್ರಸ್ತುತ ಎಸ್ ಬಿಐ 400 ಕೋಟಿ ಹೆಚ್ಚುವರಿ ಹೊರೆಯನ್ನು ಎದುರಿಸುತ್ತಿದ್ದು, ದಂಡದ ಮೂಲಕ ಸಂಗ್ರಹಿಸುವ ಹಣವನ್ನು ಇಂತಹ ಹೆಚ್ಚುವರಿ ಹೊರೆ ತಗ್ಗಿಸಲು ಬಳಕೆ ಮಾಡಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ಇನ್ನು ಈ ಹಿಂದೆ ಆರ್ ಟಿಐ ಅರ್ಜಿ ಮೂಲಕ ಬಂದ ಮಾಹಿತಿಯಂತೆ ಭಾರತದ ಪ್ರಮುಖ ಬ್ಯಾಂಕಿಂಗ್ ಸೇವಾ ಸಂಸ್ಥೆ ಎಸ್ ಬಿಐನ ಮೊದಲ ತ್ತೈಮಾಸಿಕ ವರದಿಯಲ್ಲಿ ದಂಡದ ರೂಪದಲ್ಲೇ ಸುಮಾರು 235.06 ಕೋಟಿ ರೂ.ಗಳನ್ನು ಸಂಗ್ರಹಿಸಿದೆ ಎಂದು ತಿಳಿದುಬಂದಿದೆ. ಜೂನ್ ತಿಂಗಳಲ್ಲಿ ಪ್ರಕಟವಾದ ಬ್ಯಾಂಕ್ ನ ತ್ರೈಮಾಸಿಕ ವರದಿಯಲ್ಲಿ ಎಸ್ ಬಿಐ ಗ್ರಾಹಕರಿಂದ ಒಟ್ಟು 388.74 ಲಕ್ಷ ಖಾತೆದಾರರಿಂದ ಕನಿಷ್ಠ ಠೇವಣೆ ಇಡದ ಕಾರಣ 235.06 ಕೋಟಿ ರೂ.ಗಳನ್ನು ದಂಡವಾಗಿ ಸಂಗ್ರಹಿಸಿದೆ ಎಂದು ತಿಳಿದುಬಂದಿತ್ತು.