ಎಸ್ಬಿಐ ಗ್ರಾಹಕರಿಗೆ ಸಂತಸದ ಸುದ್ದಿ, ಎಫ್ ಡಿ ಬಡ್ಡಿ ದರ ಏರಿಕೆ
ಮುಂಬೈ: ದೇಶದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ದೀರ್ಘಾವಧಿ ನಿರಖು ಠೇವಣಿಯ (ಎಫ್ ಡಿ) ಬಡ್ಡಿ ದರಗಳನ್ನು ಪರಿಷ್ಕರಿಸಿದೆ. ಚಿಲ್ಲರೆ ದೇಶೀಯ ಠೇವಣಿ(ಒಂದು ಕೋಟಿ ರೂ.ಗಿಂತ ಕಡಿಮೆ) ಯ ಮೇಲೆ ಬಡ್ಡಿದರಗಳನ್ನು ಬ್ಯಾಂಕ್ ಪರಿಷ್ಕರಿಸಿದ್ದು ಇಂದು (ಫೆಬ್ರವರಿ 28)ನಿಂದ ಈ ಹೊಸ ದರ ಜಾರಿಗೆ ಬರಲಿದೆ.
ಒಂದು ಕೋಟಿ ರೂ. ಗಿಂತ ಕಡಿಮೆ ದೀರ್ಘಾವಧಿ ನಿರಖು ಠೇವಣಿಗಳಿಗೆ ಈ ಹಿಂದೆ ಶೇ. 6.25 ಬಡ್ಡಿ ನೀಡಲಾಗುತ್ತಿತ್ತು. ಆದರೆ ಇನ್ನು ಹೊಸ ದರದಂತೆ ಒಂದು ವರ್ಷದ ಠೇವಣಿಗೆ ಶೇ.6.40 ಬಡ್ಡಿ ದೊರೆಯಲಿದೆ. ಅದೇ ರೀತಿ ಎರಡರಿಂದ ಹತ್ತು ವರ್ಷಗಳ ಠೇವಣಿಗೆ ಶೇ.6.50(ಶೇ. 6), ಏಳರಿಂದ ನಲವತ್ತೈದು ದಿನಗಳ ಅಲ್ಪಾವಧಿ ಠೇವಣಿಗೆ ಶೇ. 5.75( ಶೇ.5.25) ಬಡ್ಡಿ ದರ ನಿಗದಿಪಡಿಸಲಾಗಿದೆ.
ಇನ್ನು ಹಿರಿಯ ನಾಗರಿಕರು ಸಹ ನಿರಖು ಠೇವಣಿ ಬಡ್ಡಿ ದರಗಳ ಏರಿಕೆ ಸಂತಸವನ್ನು ಅನುಭವಿಸಬಹುದಾಗಿದೆ. ಎರಡರಿಂದ ಹತ್ತು ವರ್ಷಗಳ ಅವಧಿಗೆ ಠೇವಣಿ ಇಟ್ಟ ಹಿರಿಯ ನಾಗರಿಕರು ಈ ಹಿಂದೆ ಶೇ.6.50 ಬಡ್ಡಿ ಪಡೆಯುತ್ತಿದ್ದರು ಆದರೆ ನೂತನ ಬಡ್ಡಿ ದರದ ಅನುಸಾರ ಅವರು ಮುಂದಿನ ದಿನಗಳಲ್ಲಿ ಶೇ.7 ಬಡ್ಡಿ ಪಡೆಯಲಿದ್ದಾರೆ. ಹಾಗೆಯೇ ಒಂದು ವರ್ಷ ಅವಧಿಯ ಠೇವಣಿ ಇರಿಸಿದ ಹಿರಿಯ ನಾಗರಿಕರು ಈ ಹಿಂದೆ ಪಡೆಯುತ್ತಿದ್ದ ಶೇ. 6.75ರ ಬಡ್ಡಿಯ ಹೊರತಾಗಿ ಶೇ.6.9 ಬಡ್ಡಿ ಪಡೆಯುತ್ತಾರೆ.
ಒಂದು ಕೋಟಿಯಿಂದ ಹತ್ತು ಕೋಟಿ ರೂ. ದೇಶೀಯ ಬೃಹತ್ ಅವಧಿಯ ಠೇವಣಿಗಳ ಮೇಲೆ ಒಂದು ವರ್ಷದಿಂದ 455 ದಿನಗಳ ಅವಧಿಗೆ ಶೇ.6.75 ಬಡ್ಡಿ ಸಿಗಲಿದೆ. ಐದರಿಂದ ಹತ್ತು ವರ್ಷಗಳ ಅವಧಿಗೆ ಈ ಬೃಹತ್ ಠೇವಣಿಗೆ ಶೇ. 6.25 ಬದ್ಡಿ ದೊರೆಯಲಿದೆ. ಒಂದರಿಂದ ಹತ್ತು ಕೋಟಿ ವರೆಗೆ ಠೇವಣಿ ಇರಿಇಸುವ ಹಿರಿಯ ಣಾಗರಿಕರಿಗೆ ಕ್ರಮವಾಗಿ ಶೇ.7.25 (ಒಂದು ವರ್ಷದಿಂದ 455 ದಿನಗಳ ಅವಧಿ), ಶೇ.6.75 (ಐದರಿಂದ ಹತ್ತು ವರ್ಷಗಳ ಕಾಲದ ಅವಧಿ), ಶೇ.7.15 (ಮೂರರಿಂದ ಐದು ವರ್ಷಗಳ ಅವಧಿ), ಶೇ.6.25 (ಏಳರಿಂದ 45 ದಿನಗಳ ಅವಧಿ) ಬಡ್ಡಿ ಪಡೆಯಲಿದ್ದಾರೆ.