ಬೆಂಗಳೂರು: ದೇಶದ ಖ್ಯಾತ ಐಟಿ ಸಂಸ್ಥೆ ಇನ್ಫೋಸಿಸ್ ನ ನೂತನ ಸಿಇಒ ಸಲಿಲ್ ಪರೇಖ್ ಅವರು ವಾರ್ಷಿಕ ರೂ.16.25 ಕೋಟಿ ವೇತನ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.
ಭಾರತದ ಎರಡನೇ ಅತಿದೊಡ್ಡ ಹೊರಗುತ್ತಿಗೆ ಸಂಸ್ಥೆ ಕೂಡ ಆಗಿರುವ ಇನ್ಫೋಸಿಸ್ ನ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಲಿಲ್ ಪರೇಖ್ ಅವರು,2018-19ನೇ ಆರ್ಥಿಕ ವರ್ಷದಲ್ಲಿ ಒಟ್ಟು ರೂ.16.25 ಕೋಟಿ ವೇತನ ಪಡೆಯಲಿದ್ದಾರೆ. ಈ ವೇತನದಲ್ಲಿ ರೂ.6.5 ಕೋಟಿ ಸ್ಥಿರ ವೇತನವಾದರೆ ಇತರೆ ಭತ್ಯೆ ರೂ.9.75 ಕೋಟಿ ಮತ್ತು ಕೇವಲ ವೇತನ ಮಾತ್ರವಲ್ಲದೇ ಸಲಿಲ್ ಪರೇಖ್ ಅವರು ಸಂಸ್ಥೆಯ ಷೇರುಗಳನ್ನು ಕೂಡ ಹೊಂದಬಹುದಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇನ್ನು ಸಂಸ್ಥೆಯ ಈ ಹಿಂದಿನ ಸಿಇಒ ವಿಶಾಲ್ ಸಿಕ್ಕಾ ಅವರು 2017ರ ಆರ್ಥಿಕ ವರ್ಷದಲ್ಲಿ 67.5 ಲಕ್ಷ ಯುಎಸ್ ಡಾಲರ್ ವೇತನ ಪಡೆಯುತ್ತಿದ್ದರು. ಇದು ಸಂಸ್ಥೆಯ ಸಂಸ್ಥಾಪಕರಾದ ಎನ್ ಆರ್ ನಾರಾಯಣ್ ಮೂರ್ತಿ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಪರೇಖ್ ಅವರನ್ನು 5 ವರ್ಷಗಳ ಕಾಲ ಈ ಹುದ್ದೆಗೆ ನೇಮಕ ಮಾಡಲಾಗಿದ್ದು, ಸಂಬಳದ ಜತೆಗೆ ರೂ.3.25 ಕೋಟಿ ನಿರ್ಬಂಧಿತ ಸ್ಟಾರ್ ಯೂನಿಟ್ ಗಳನ್ನು ಪಡೆಯಲಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ನೂತನ ಸಿಇಓ ಪರೇಖ್ ಅವರ ಉದ್ಯೋಗ ಒಪ್ಪಂದದ ಅನ್ವಯ ಅವರು ಕೆಲಸ ಬಿಟ್ಟ ಮೇಲೆ ಆರು ತಿಂಗಳ ತನಕ ಇನ್ಫೋಸಿಸ್ ಸ್ಪರ್ಧಾ ಕಂಪೆನಿಗಳ ಜತೆಗೆ ಯಾವುದೇ ಕೆಲಸ ಮಾಡುವಂತಿಲ್ಲ. ಅದೇ ರೀತಿ ಇನ್ಫೋಸಿಸ್ ಗ್ರಾಹಕ ಕಂಪೆನಿಗಳ ಜತೆಗೆ ಒಂದು ವರ್ಷಗಳ ಕಾಲ ಕೆಲಸ ಮಾಡುವಂತಿಲ್ಲ. ಒಂದು ವೇಳೆ ಪರೇಖ್ ಅವರು ಕಾರ್ಯಕ್ಷಮತೆಯ ಗುರಿ ತಲುಪದಿದ್ದರೆ ಅಷ್ಟೆಲ್ಲಾ ಸಂಬಳ ಅವರಿಗೆ ಸಿಗುವುದಿಲ್ಲ ಎಂದು ಇನ್ಱೋಸಿಸ್ ಸಂಸ್ಥೆಯ ನಾಮನಿರ್ದೇಶನ ಮತ್ತು ಸಂಭಾವನೆ ಸಮಿತಿಯ ಸದಸ್ಯೆ ಕಿರಣ್ ಮಜುಂದಾರ್ ಶಾ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos