ವಾಣಿಜ್ಯ

ಬಿಟ್ ಕಾಯಿನ್ ಕುರಿತು ನಿರ್ಣಾಯಕ ಕ್ರಮಕ್ಕೆ ಇನ್ನೂ ಸಮಯವಿದೆ: ಆರ್‏ಬಿಐ ಮಾಜಿ ಗವರ್ನರ್

Sumana Upadhyaya
ಹೈದರಾಬಾದ್: ಬಿಟ್ ಕಾಯಿನ್ ಮತ್ತು ಇತರ ಕ್ರಿಪ್ಟೊ ಕರೆನ್ಸಿಗಳಿಗೆ ನಿಯಂತ್ರಣ ನೀಡುವ ಕುರಿತು ದೇಶಾದ್ಯಂತ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ, ಈ ಬಗ್ಗೆ ನಿರ್ಣಾಯಕ ನಿರ್ಧಾರ ತೆಗೆದುಕೊಳ್ಳಲು ಇದು ಸೂಕ್ತ ಕಾಲವಲ್ಲ, ಏಕೆಂದರೆ ಬಿಟ್ ಕಾಯಿನ್ ಎಂಬುದು ತಂತ್ರಜ್ಞಾನದ ಆವಿಷ್ಕಾರವಾಗಿದ್ದು, ಅದರ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳನ್ನು ತಿಳಿದುಕೊಳ್ಳು ವ ಮುನ್ನ ಅದಕ್ಕೆ ನಿಯಂತ್ರಣ ಹಾಕಿದರೆ ತಡೆಯೊಡ್ಡಿದಂತಾಗುತ್ತದೆ ಎಂದು ರಿಸರ್ವ್ ಬ್ಯಾಂಕ್ ಮಾಜಿ ಗವರ್ನರ್ ದುವ್ವಿರಿ ಸುಬ್ಬರಾವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
''ನಾನು ರಿಸರ್ವ್ ಬ್ಯಾಂಕ್ ಗವರ್ನರ್ ಆಗಿದ್ದಾಗಲೇ ಬಿಟ್ ಕಾಯಿನ್ ವ್ಯವಹಾರದ ಪ್ರಯಾಣ ಆರಂಭವಾಗಿತ್ತು. ಆಗಷ್ಟೇ ಪ್ರವರ್ಧಮಾನಕ್ಕೆ ಬಂದಿತ್ತು. ಆ ನಂತರ ಬಿಟ್ ಕಾಯಿನ್ ಬಗ್ಗೆ ರಿಸರ್ವ್ ಬ್ಯಾಂಕ್ ಮತ್ತು ನಿಯಂತ್ರಕರು ಗಮನ ಹರಿಸುತ್ತಲೇ ಇದ್ದರು. ನಂತರ ಏಕಾಏಕಿ ಅದು ಜನಪ್ರಿಯತೆ ಪಡೆದು ಇಂದು ಅದರ ನಿಯಂತ್ರಣದ ಬಗ್ಗೆ ದೇಶಾದ್ಯಂತ ಚರ್ಚೆಗಳು ನಡೆಯುತ್ತಲೇ ಇದೆ. ಆದರೆ ಈ ಹಂತದಲ್ಲಿ ಬಿಟ್ ಕಾಯಿನ್ ಮತ್ತು ಇತರ ಕ್ರಿಪ್ಟೊ ಕರೆನ್ಸಿಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂಬುದು ನನ್ನ ಅಭಿಪ್ರಾಯ ಎಂದು ಸುಬ್ಬರಾವ್ ಹೈದರಾಬಾದ್ ನಲ್ಲಿ ಉಪನ್ಯಾಸವೊಂದರಲ್ಲಿ ಹೇಳಿದರು.
ಬಿಟ್ ಕಾಯಿನ್ ಹಿಂದಿರುವ ಬ್ಲಾಕ್ ಚೈನ್ ತಂತ್ರಜ್ಞಾನ ಮತ್ತೊಂದು ಅಪ್ಲಿಕೇಶನ್. ಇದೊಂದು ತಂತ್ರಜ್ಞಾನ ಆವಿಷ್ಕರಿತ ಹಣಕಾಸು ವ್ಯವಹಾರ. ಇಲ್ಲಿ ನಿಯಂತ್ರಣ ಮತ್ತು ಕ್ರಿಪ್ಟೊ ಕರೆನ್ಸಿಗಳ ಬೆಳವಣಿಗೆಯ ಮಧ್ಯೆ ಸಮತೋಲನ ಕಾಪಾಡಬೇಕು. ನಿಯಂತ್ರಕರು ಅದರ ಬಗ್ಗೆ ನಿಗಾ ವಹಿಸಬೇಕು ಎಂದು ಸುಬ್ಬರಾವ್ ಹೇಳಿದರು. 
ಹೂಡಿಕೆದಾರರ ಮತ್ತು ಜನರ ಹಣ ಈ ರೀತಿ ಹೂಡಿಕೆ ಮಾಡಿ ಹಣ ಕಳೆದುಕೊಂಡರೆ ಅದನ್ನು ರಿಸರ್ವ್ ಬ್ಯಾಂಕ್ ಆಸರೆಯಾಗಿ ಜನರಿಗೆ ನೆರವು ನೀಡಬೇಕೆಂದು ಬಯಸುತ್ತಾರೆ ಎಂದು ಸುಬ್ಬರಾವ್ ಹೇಳಿದರು.
ದೇಶದಲ್ಲಿ ಇಂದಿನ ಹಣಕಾಸು ಸ್ಥಿತಿಗತಿಗಳ ಬಗ್ಗೆ ಪ್ರಸ್ತಾಪಿಸಿದರು. ಅಲ್ಲದೆ ಉದ್ದೇಶಿತ ಹಣಕಾಸಿನ ನಿರ್ಣಯ ಮತ್ತು ಠೇವಣಿ ವಿಮೆ (ಎಫ್ಡಿಆರ್ಐ) ಮಸೂದೆ ಮತ್ತು ಸಾರ್ವಜನಿಕರ ಹಣವನ್ನು ಬಳಸಿಕೊಳ್ಳಲು ಬ್ಯಾಂಕುಗಳಿಗೆ ಮುಕ್ತವಾಗಿ ಸರ್ಕಾರ ಬಿಡಬೇಕು ಎಂಬುದರ ಬಗ್ಗೆ ಸುಬ್ಬರಾವ್ ಮಾತನಾಡಿದರು.
SCROLL FOR NEXT