ಮುಂಬೈ: ಭಾರತೀಯ ಷೇರುಮಾರುಕಟ್ಟೆ ಮತ್ತೊಂದು ದಾಖಲೆ ಬರೆದಿದ್ದು, ಸೋಮವಾರದ ವಹಿವಾಟು ಆರಂಭವಾಗುತ್ತಿದ್ದಂತೆಯೇ ಸೆನ್ಸೆಕ್ಸ್ 34, 300ರ ಗಡಿ ದಾಟುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ.
ವಿದೇಶಿ ಬಂಡವಾಳದ ಒಳ ಹರಿವು ಹೆಚ್ಚಿರುವ ಪರಿಣಾಮ ಹೊಸ ಉತ್ತೇಜನ ಪಡೆದಿರುವ ಭಾರತೀಯ ಷೇರು ಮಾರುಕಟ್ಟೆ, ಇಂದು ದಾಖವೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಇಂದಿನ ವಹಿವಾಟು ಆರಂಭವಾಗುತ್ತಿದ್ದಂತೆಯೇ ಸೆನ್ಸೆಕ್ಸ್ 178 ಅಂಕಗಳ ಏರಿಕೆ ಕಾಣುವ ಮೂಲಕ 34,331 ಅಂಕಗಳಿಗೆ ಏರಿಕೆಯಾಯಿತು. ಆ ಮೂಲಕ ಕಳೆದೆರಡು ವಹಿವಾಟು ದಿನಗಳಲ್ಲಿ ಸೆನ್ಸೆಕ್ಸ್ ಒಟ್ಟು 360.47 ಅಂಕಗಳನ್ನು ಏರಿಸಿಕೊಂಡಿದ್ದು, ಈ ಹಿಂದೆ ಸೆನ್ಸೆಕ್ಸ್ 33, 185 ಅಂಕಗಳಿಗೆ ಏರಿಕೆಯಾಗುವ ಮೂಲಕ ದಾಖಲೆ ಬರೆದಿತ್ತು.
ಇನ್ನು ನಿಫ್ಟಿ ಕೂಡ 46.95 ಅಂಕಗಳ ಏರಿಕೆಯೊಂದಿಗೆ 10,600ಕ್ಕೆ ಏರಿಕೆಯಾಗಿದೆ. ಇಂದಿನ ವಹಿನಾಟಿನಲ್ಲಿ ಫಾರ್ಮಾ, ಐಟಿ ಮತ್ತು ಬ್ಯಾಂಕಿಂಗ್ ಷೇರುಗಳ ಮೌಲ್ಯದಲ್ಲಿ ಏರಿಕೆ ಕಂಡುಬಂದಿದ್ದು, ಪ್ರಮುಖವಾಗಿ ಸನ್ ಫಾರ್ಮಾ, ಯೆಸ್ ಬ್ಯಾಂಕ್, ಡಾ.ರೆಡ್ಡೀಸ್, ಎಲ್ ಅಂಡ್ ಟಿ, ಇನ್ ಫೋಸಿಸ್, ಹೆಚ್ ಡಿಎಫ್ ಸಿ ಲಿಮಿಟೆಡ್, ಪವರ್ ಗ್ರಿಡ್, ಒಎನ್ ಜಿಸಿ, ಕೋಲ್ ಇಂಡಿಯಾ, ಐಸಿಐಸಿಐ ಬ್ಯಾಂಕ್, ಇಂಡಸಿಂಡ್ ಬ್ಯಾಂಕ್, ಹೀರೊ ಮೋಟೋ ಕಾರ್ಪ್, ಟಾಟಾ ಸ್ಟೀಲ್ ಮತ್ತು ಟಾಟಾ ಮೋಟರ್ಸ್ ಸಂಸ್ಥೆಗಳ ಷೇರುಗಳ ಮೌಲ್ಯ ಶೇ. 3.72 ರಷ್ಟು ಏರಿಕೆಯಾಗಿದೆ.