ವಾಣಿಜ್ಯ

ಆರ್ ಬಿಐ ರೆಪೋ ದರ ಶೇ.6.25ಕ್ಕೆ ಏರಿಕೆ, ಬ್ಯಾಂಕ್ ಗ್ರಾಹಕರ ಜೇಬಿಗೆ ಕತ್ತರಿ

Lingaraj Badiger
ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ) ಬುಧವಾರ ತನ್ನ ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಿದ್ದು, ರೆಪೋ ದರವನ್ನು ಶೇ.6ರಿಂದ ಶೇ.6.25ಕ್ಕೆ ಏರಿಕೆ ಮಾಡಿದೆ.
ಕಳೆದ ನಾಲ್ಕುವರೆ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ರೆಪೋ ದರ ಏರಿಕೆ ಮಾಡಿರುವ ಆರ್ ಬಿಐ, ರಿವರ್ಸ್ ರೆಪೋ ದರವನ್ನು ಶೇ.0.25ರಷ್ಟು ಏರಿಸಿ ಶೇ.6ಕ್ಕೆ ನಿಗದಿಪಡಿಸಿದೆ. ಇದರಿಂದ ಬ್ಯಾಂಕ್ ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ, ಡಾಲರ್ ವಿರುದ್ಧ ರುಪಾಯಿ ಮೌಲ್ಯ ಕುಸಿತ ಹಾಗೂ ಹಣದುಬ್ಬರ ಏರಿಕೆ ಮತ್ತಿತ್ತರ ಸಂಕಿರ್ಣ ಸಂದಿಗ್ಧಸ್ಥಿತಿಯಲ್ಲಿ ಆರ್ ಬಿಐ ರೆಪೋ ದರ ಏರಿಸಿದ್ದು, ಬ್ಯಾಂಕ್ ಸಾಲದ ಮೇಲಿನ ಬಡ್ಡಿ ದರ ಏರಿಕೆಯಾಗಲಿದೆ.
ಇಂದು ಆರ್ ಬಿ ಐ ನ ಹಣಕಾಸು ನೀತಿ ನಿರೂಪಣೆ ಸಮಿತಿಯ ಎಲ್ಲ ಆರು ಸದಸ್ಯರು ಪ್ರಮುಖ ಬಡ್ಡಿ ದರಗಳನ್ನು ಏರಿಸುವ ಸರ್ವಾನುಮತದ ನಿರ್ಧಾರ ಕೈಗೊಂಡಿದ್ದು, ದೇಶದ ಹಾಲಿ ಸ್ಥೂಲ ಆರ್ಥಿಕ ಸ್ಥಿತಿಗತಿಯನ್ನು ಅನುಲಕ್ಷಿಸಿ ಬಡ್ಡಿ ದರ ಏರಿಸುವ ನಿರ್ಣಯವನ್ನು ಕೈಗೊಳ್ಳಲಾಯಿತೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

2018-19ರ ಸಾಲಿನಲ್ಲಿ ಎಪ್ರಿಲ್‌ ನಲ್ಲಿ ನಡೆದಿದ್ದ ಆರ್ ಬಿಐ ಮೊದಲ ದ್ವೆಮಾಸಿಕ ಹಣಕಾಸು ನೀತಿ ಪರಾಮರ್ಶೆಯ ಸಂದರ್ಭದಲ್ಲಿ ಈ ವರ್ಷದ ಮೊದಲರ್ಧದಲ್ಲಿ ಗ್ರಾಹಕ ಬೆಲೆ ಸೂಚ್ಯಂಕ ಹಣದುಬ್ಬರ ಶೇ.4.7ರಿಂದ ಶೇ.5.1ರ ನಡುವೆ ಇರುವುದೆಂದು ಅಂದಾಜಿಸಲಾಗಿತ್ತು. ಆದೇ ರೀತಿಯ  ವರ್ಷದ ದ್ವಿತೀಯಾರ್ಧದಲ್ಲಿ ಶೇ.4.4ರ ಹಣದುಬ್ಬರ ಇರುವುದೆಂದು ಅಂದಾಜಿಸಿದೆ.

ರಿಸರ್ವ್ ಬ್ಯಾಂಕ್ ವಿವಿಧ ಬ್ಯಾಂಕ್ ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರವನ್ನು ರೆಪೋ ದರ ಎಂದು ಕರೆಯಲಾಗುತ್ತದೆ. ಈ ರೆಪೋ ದರವು ಬ್ಯಾಂಕ್ ಗಳು ತನ್ನ ಗ್ರಾಹಕರಿಗೆ ನೀಡುವ ಬಡ್ಡಿ ದರವನ್ನು ನಿರ್ಧರಿಸುತ್ತದೆ.
SCROLL FOR NEXT