ಸತತ ಎರಡನೇ ತಿಂಗಳೂ ಇಳೆಕೆ ಕಂಡ ಜಿಎಸ್ಟಿ, ಫೆಬ್ರವರಿಯಲ್ಲಿ 85,174 ಕೋಟಿ ರೂ. ಆದಾಯ ಸಂಗ್ರಹ
ನವದೆಹಲಿ: ಸತತ ಎರಡನೇ ತಿಂಗಳು ಸಹ ಸರಕು ಹಾಗೂ ಸೇವಾ ತೆರಿಗೆ ಅಡಿಯಲ್ಲಿ ಆದಾಯ ಸಂಗ್ರಹಣೆ ಕುಸಿತ ದಾಖಲಾಗಿದೆ. ಫೆಬ್ರವರಿಯಲ್ಲಿ 1,144 ಕೋಟಿ ರೂ ಕುಸಿತ ದಾಖಲಿಸಿರುವ ಜಿಎಸ್ಟಿ ಆದಾಯ ಸಂಗ್ರಹಣೆ 85,174 ಕೋಟಿ ರೂ.ಗೆ ತಲುಪಿದೆ.
ಇದೇ ರಿಟಿ ಜನವರಿಯಲ್ಲಿ ಸಹ ಜಿಎಸ್ಟಿ ಸಂಗ್ರಹ ಕುಸಿತ ದಾಖಲಾಗಿತ್ತು. ಕಳೆದ ವರ್ಷಾ ಡಿಸೆಂಬರ್ ನಲ್ಲಿ 86,703 ಕೋಟಿ ರೂ. ಇದ್ದ ಆದಾಯ ಸಂಗ್ರಹ ಜನವರಿ ಮಾಹೆಯಲ್ಲಿ 86,318 ಕೋಟಿ ರೂ. ಗೆ ಇಳಿದಿತ್ತು.
ಫೆಬ್ರವರಿ 2018 (ಮಾರ್ಚ್ 26 ರವರೆಗೆ) ಜಿಎಸ್ಟಿ ಅಡಿಯಲ್ಲಿ 85,174 ಕೋಟಿ ರೂಪಾಯಿ ಒಟ್ಟು ಆದಾಯ ಸಂಗ್ರಹವಾಗಿದೆ" ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.ಇದೇ ವೇಳೆ ಫೆಬ್ರವರಿಯ ಜಿಎಸ್ಟ್ ರಿಟರ್ನ್ಸ್ ಸಲ್ಲಿಕೆಯ ಬಗೆಗೆ ವಿವರಿಸಿದ ಸಚಿವಾಲಯ ಮಾರ್ಚ್ 25 ರವರೆಗೆ 59.51 ಲಕ್ಷ ಜಿಎಸ್ಟಿ ರಿಟರ್ನ್ಸ್ ಸಲ್ಲಿಸಲಾಗಿದೆ ಎಂದು ತಿಳಿಸಿದೆ.
ಒಟ್ಟು ಜಿಎಸ್ಟಿ ಆದಾಯ ಸಂಗ್ರಹಣೆ 85,174 ಕೋಟಿ ರೂ.ಗಳಲ್ಲಿ ಕೇಂದ್ರ ಜಿಎಸ್ಟಿ (ಸಿಜಿಎಸ್ಟಿ) ಸಂಗ್ರಹದ ಪ್ರಮಾಣ 14,945 ಕೋಟಿ ರೂ.ಆಗಿದ್ದರೆ 20,456 ಕೋಟಿ ರೂ.ರಾಜ್ಯ ಜಿಎಸ್ಟಿ (ಎಸ್ಜಿಎಸ್ಟಿ) ಸಂಗ್ರಹವಾಗಿದೆ. ಇನ್ನು 42,456 ಕೋಟಿ ರೂ. ಇಂಟಿಗ್ರೇಟೆಡ್ ಜಿಎಸ್ಟಿ (ಐಜಿಎಸ್ಟಿ) ಮತ್ತು ರೂ 7,317 ಕೋಟಿ ಪರಿಹಾರ ಸೆಸ್ ಸಂಗ್ರಹಣೆ ಆಗಿರುವುದಾಗಿ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.