ನವದೆಹಲಿ: ನೂತನ ಸರಕು ಮತ್ತು ಸೇವಾ ತೆರಿಗೆ ಜಿಎಸ್ ಟಿಯಿಂದ ಏಪ್ರಿಲ್ ನಲ್ಲಿ 1 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ. ಇದೊಂದು ಮಹತ್ವದ ಸಾಧನೆ ಅಲ್ಲದೆ ಇದರಿಂದ ಆರ್ಥಿಕ ಚಟುವಟಿಕೆ ಹೆಚ್ಚಳವಾಗಿರುವುದು ಸಾಬೀತಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ
ಕಳೆದ ಜುಲೈನಲ್ಲಿ ಜಾರಿಗೆ ಬಂದ ಹೊಸ ತೆರಿಗೆ ಪದ್ದತಿಯಿಂದ ಏಪ್ರಿಲ್ ವೇಳೆಗೆ 1.03 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ ಎಂದು ಸರ್ಕಾರ ಹೇಳಿದೆ. 2017-18ರಲ್ಲಿ ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್ಟಿ) ಸಂಗ್ರಹವು 7.41 ಲಕ್ಷ ಕೋಟಿ ರೂ ಗಳಷ್ತಾಗಿದ್ದರೆ ಈ ಮಾರ್ಚ್ ಅಂತ್ಯದಲ್ಲಿ ಅದು 89,264 ಕೋಟಿ ರೂ ಗೆ ತಲುಪಿತ್ತು.
"ಏಪ್ರಿಲ್ ನಲ್ಲಿ ಜಿಎಸ್ಟಿ ಸಂಗ್ರಹವು 1 ಲಕ್ಷ ಕೋಟಿ ರೂ. ಮೀರಿದೆ. ಇದೊಂದು ಮಹತ್ವದ ಸಾಧನೆಯಾಗಿದೆ/ ಆರ್ಥಿಕ ಚಟುವಟಿಕೆಗಳ ಹೆಚ್ಚಲವನ್ನು ಇದು ದೃಢೀಕರಿಸಿದೆ ಎಂದು ಜೇಟ್ಲಿ ತಮ್ಮ ಟ್ವಿಟ್ಟರ್ ನಲ್ಲಿ ಹೇಳಿದ್ದಾರೆ.
ಸುಧಾರಿತ ಆರ್ಥಿಕ ವಾತಾವರಣ, ಇ-ವೇ ಬಿಲ್ ಮತ್ತು ಸುಧಾರಿತ ಜಿಎಸ್ಟಿ ಪರೋಕ್ಷ ಸಂಗ್ರಹಣೆಗಳು ಧನಾತ್ಮಕ ಪ್ರವೃತ್ತಿ ಮುಂದುವರಿಯುವದನ್ನು ಖಾತ್ರಿಪಡಿಸುತ್ತದೆ ಎಂದು ಅವರು ಹೇಳಿದ್ದಾರೆ.
ಏಪ್ರಿಲ್ 2018 ರಲ್ಲಿ ಸಂಗ್ರಹಿಸಿದ ಒಟ್ಟಾರೆ ಜಿಎಸ್ಟಿ ಆದಾಯ 1,03,458 ಕೋಟಿ ರೂ.ಗಳಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಇದರಲ್ಲಿ ಸಿಜಿಎಸ್ಟಿ 1ಪಾಲು 8,652 ಕೋಟಿ ರೂ. ಆಗಿದ್ದರೆ ಎಸ್ಜಿಎಸ್ಟಿ 25,704 ಕೋಟಿ ರೂ., ಐಜಿಎಸ್ಟಿ 50,548 ಕೋಟಿ ರೂ. ನಷ್ಟಿದೆ. 8,554 ಕೋಟಿ ರೂ ಸೆಸ್ ಸಂಗ್ರಹವಾಗಿದ್ದು ಇದರಲ್ಲಿ ಆಮದುಗಳ ಮೇಲೆ ಸಂಗ್ರಹಿಸಿದ 702 ಕೋಟಿ ರೂ ಸಹ ಸೇರಿದೆ.