ವಾಣಿಜ್ಯ

ಪಿಎನ್ಬಿ ವಂಚನೆ: ಇಡಿಯಿಂದ ಮೆಹುಲ್ ಚೋಕ್ಸಿ ಸಂಸ್ಥೆಯ 85 ಕೋಟಿ ರೂ.ಮೌಲ್ಯದ ಆಭರಣ ವಶ

Raghavendra Adiga
ನವದೆಹಲಿ: 13 ಸಾವಿರ ಕೋಟಿ ರೂ. ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಯ ಮಾಲೀಕತ್ವದ ಗೀತಾಂಜಲಿ ಗ್ರೂಪ್ಸ್ ನ 85 ಕೋಟಿ ರೂ. ಮೌಲ್ಯದ 34 ಸಾವಿರ ಸಂಖ್ಯೆಯ ಆಭರಣಗಳನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದುಕೊಂಡಿದೆ.
ಆಭರಣಗಳನ್ನು ದುಬೈನಿಂದ ತರಲಾಗಿದ್ದು ಅಕ್ರಮ ಹಣ ವರ್ಗಾವಣೆ ನಿಷೇಧ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಈ ಕ್ರಮ ಜರುಗಿಸಲಾಗಿದೆ ಎಂದು ಇಡಿ ತನ್ನ ಪ್ರಕಟಣೆಯಲ್ಲಿ ಹೇಳಿದೆ.
ವಜ್ರದ ವ್ಯಾಪಾರಿ ನೀರವ್ ಮೋದಿ ಜತೆಗೆ ಸೇರಿ ಪಿಎನ್ಬಿ ಗೆ ಸಾವಿರಾರು ಕೋಟಿ ರೂ. ವಂಚನೆ ನಡೆಸಿದ್ದ ಚೋಕ್ಸಿ ವಿರುದ್ಧ ಇಡಿ ತನಿಖೆ ನಡೆಸುತ್ತಿದೆ..
ಪಿಎನ್ಬಿ ಗೆ 13 ಸಾವಿರ ಕೋಟಿ ರೂ. ವಂಚಿಸಿದ್ದ ಪ್ರಕರಣ ಈ ವರ್ಷ ಫೆಬ್ರವರಿಯಲ್ಲಿ ಬೆಳಕಿಗೆ ಬಂದಿದ್ದು ಬ್ಯಾಂಕಿನ ಕೆಲ ಉದ್ಯೋಗಿಗಳು ಸಹ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗುಇದೆ.ಈ ಪ್ರಕರಣ ಸಂಬಂಧ ನೀರವ್ ಮೋದಿ ಹಾಗೂ ಚೋಕ್ಸಿ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಇಡಿ ಎಫ್ಐಆರ್ ದಾಖಲಿಸಿ ತನಿಖೆ ನಡೆಸುತ್ತಿದೆ.
ಇದಾಗಲೇ ಸಿಬಿಐ ಮುಂಬೈ ನ್ಯಾಯಾಲಯಕ್ಕೆ ಎರಡು ಪ್ರತ್ಯೇಕ ಚಾರ್ಜ್ ಶೀಟ್ ಗಳನ್ನು ಸಲ್ಲಿಸಿದೆ. ಆದರೆ ಇಡಿ ತಾನು ಪ್ರತ್ಯೇಕ ಚಾರ್ಜ್ ಶೀಟ್ ಸಲ್ಲಿಸುವ ನಿರೀಕ್ಷೆ ಇದೆ.
ಮೋದಿ ಹಾಗೂ ಚೋಕ್ಸಿ ತಮ್ಮ ಮೇಲೆ ಕ್ರಿಮಿನಲ್  ಪ್ರಕರಣಗಳು ದಾಖಲಾಗುವ ಮುನ್ನವೇ ದೇಶ ತೊರೆದು ಪರಾರಿಯಾಗಿದ್ದಾರೆ.
SCROLL FOR NEXT