ವಾಣಿಜ್ಯ

'ಸ್ಟೆರ್ಲೈಟ್' ಬೀಗಮುದ್ರೆ ಬೆನ್ನಲ್ಲೇ ಗಗನಕ್ಕೇರುತ್ತಿದೆ ತಾಮ್ರದ ಬೆಲೆ

Srinivasamurthy VN
ಮುಂಬೈ: ತೂತುಕುಡಿ ನಿವಾಸಿಗಳ ತೀವ್ರ ಪ್ರತಿಭಟನೆ ಮತ್ತು ಹಿಂಸಾಚಾರಕ್ಕೆ 13 ಮಂದಿ ಬಲಿಯಾದ ಬಳಿಕ ಸ್ಟೆರ್ಲೈಟ್ ತಾಮ್ರ ಕಂಪನಿಯನ್ನು ಮುಚ್ಚಲಾಗಿದೆ. ಆದರೆ ಇದರಿಂದ ದೇಶದಲ್ಲಿ ತಾಮ್ರದ ಬೆಲೆ ಗಗನಕ್ಕೇರುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.
ಈಗಾಗಲೇ ಇದರ ಸುಳಿವು ಕಾಣುತ್ತಿದ್ದು, ಈಗಾಗಲೇ ದೇಶದಲ್ಲಿ ತಾಮ್ರದ ಆಮದಿನ ಪ್ರಮಾಣ ಹೆಚ್ಚಾಗಿದೆ. ಅಲ್ಲದೆ ತಾಮ್ರದ ದರ ಕೂಡ ಕ್ರಮೇಣ ಹೆಚ್ಚಾಗುತ್ತಿದ್ದು, ಭವಿಷ್ಯದಲ್ಲಿ ತಾಮ್ರದ ದರ ಗಗನಕ್ಕೇರುವ ಎಲ್ಲ ಲಕ್ಷಣಗಳೂ ಇವೆ ಎಂದು ಹೇಳಲಾಗುತ್ತಿದೆ. ಪ್ರಮುಖವಾಗಿ ಈ ಬೆಳವಣಿಗೆಗೆ ತೂತುಕುಡಿಯಲ್ಲಿರುವ ತಾಮ್ರದ ಉತ್ಪಾದನಾ ಘಟಕಕ್ಕೆ ಬೀಗಮುದ್ರೆ ಬಿದ್ದಿರುವುದೇ ಕಾರಣ ಎಂದು ಹೇಳಲಾಗುತ್ತಿದ್ದು, ಈ ಘಟಕದಿಂದ ಷೇ.40ರಷ್ಟು ತಾಮ್ರದ ಉತ್ಪಾದನೆಯಾಗುತ್ತಿತ್ತು. ಆದರೀಗ ಸಂಸ್ಥೆಗೆ ಬೀಗ ಮುದ್ರೆ ಬಿದ್ದಿರುವುದರಿಂದ ದೇಶಕ್ಕೆ ಶೇ.40ರಷ್ಟು ತಾಮ್ರದ ಉತ್ಪಾದನೆಯ ಕೊರತೆ ಉಂಟಾಗಲಿದೆ.
ಪ್ರಮುಖವಾಗಿ ವಿದ್ಯುತ್ ತಂತಿ ತಯಾರಕ ಸಂಸ್ಥೆಗಳು ಮತ್ತು ವಿದ್ಯುನ್ಮಾನ ಯಂತ್ರೋಪಕರಣ ತಯಾರಿಕಾ ಸಂಸ್ಥೆಗಳ ಮೇಲೆ ಇದರ ನೇರ ಪರಿಣಾಮ ಬೀರಲಿದ್ದು, ತಾಮ್ರದ ಬೆಲೆ ಏರಿಕೆಯಿಂದಾಗಿ ಈ ಸಂಸ್ಥೆಗಳು ಅನಿವಾರ್ಯವಾಗಿ ತಮ್ಮ ಉತ್ಪನ್ನಗಳ ಬೆಲೆ ಏರಿಕೆ ಮಾಡಬೇಕಾಗುತ್ತದೆ. ಇನ್ನು ಸ್ಟೆರ್ಲೈಟ್ ಸಂಸ್ಥೆ ಮುಚ್ಚಿರುವುದರಿಂದ ಅಂತಾರಾಷ್ಟ್ರೀಯ ತಾಮ್ರದ ಮಾರುಕಟ್ಟೆ ಮೇಲೆ ನೇರ ಪರಿಣಾಮ ಬೀರದಿದ್ದರೂ, ತಾಮ್ರದ ಉತ್ಪಾದನಾ ಪ್ರಮಾಣದ ಮೇಲೆ ಖಂಡಿತಾ ಪರಿಣಾಮ ಬೀರುತ್ತದೆ.
ತೂತುಕುಡಿ ತಾಮ್ರ ಉತ್ಪಾದನೆ ಘಟಕ ಸ್ಥಗಿತದಿಂದಾಗಿ ದೇಶದಲ್ಲಿ ನೇರವಾಗಿ ಮತ್ತು ಪರೋಕ್ಷವಾಗಿ ಸುಮಾರು 50 ಸಾವಿರ ಉದ್ಯೋಗ ಕಳೆದುಕೊಳ್ಳಲ್ಲಿದ್ದಾರೆ. ಅಲ್ಲದೆ ಸುಮಾರು 20 ಸಾವರಿ ಕೋಟಿ ನಷ್ಟವಾಗುವ ಕುರಿತು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ. ಇನ್ನು ಈ ಸ್ಟೆರ್ಲೈಟ್ ಘಟಕವನ್ನೇ ನೆಚ್ಚಿಕೊಂಡು ಎಲೆಕ್ಟ್ರಿಕ್ ವಲಯದಲ್ಲಿ ಸುಮಾರು 1 ಸಾವಿರದಷ್ಟು  ಸಣ್ಣ ಮತ್ತು ಮಧ್ಯಮ ಕಂಪನಿಗಳು ಕಾಯ೯ನಿವ೯ಹಿಸುತ್ತಿವೆ.
ಇನ್ನು ಈ ಸ್ಟೆರ್ಲೈಟ್ ಸಂಸ್ಥೆಯ ಮಾಲೀಕರಾದ ವೇದಾಂತ ಗ್ರೂಪ್ಸ್, ದೇಶದ 2ನೇ ಅತೀ ದೊಡ್ಡ ತಾಮ್ರದ ಉತ್ಪಾದಕರಾಗಿದ್ದಾರೆ. ದೇಶದಲ್ಲಿ ಉತ್ಪಾದನೆಯಾಗುವ ಒಟ್ಟಾರೆ ತಾಮ್ರದ ಪೈಕಿ ಶೇ.40 ರಷ್ಟು ತಾಮ್ರವನ್ನು ಈ ಸ್ಟೆರ್ಲೈಟ್ ಸಂಸ್ಥೆಯೇ ಉತ್ಪಾದನೆ ಮಾಡುತ್ತಿದೆ. ಭಾರತದಲ್ಲಿ ವಾಷಿ೯ಕವಾಗಿ 10 ಲಕ್ಷ ಟನ್ ಗಳಷ್ಟು ರಿಫೈನಿಂಗ್ ಕಾಪರ್ ತಯಾರಾಗುತ್ತದೆ. ವೇದಾಂತ ಸಮೂಹದ ಸ್ಟೆರ್ಲೈಟ್ ಸಂಸ್ಥೆಯ ಘಟಕಗಳಿಂದ ಒಟ್ಬಾರೆ 4 ಲಕ್ಷ ಟನ್ ಗಳಷ್ಟು ತಾಮ್ರ ಉತ್ಪಾದನೆಯಾಗುತ್ತದೆ.  ತೂತುಕುಡಿಯಲ್ಲಿರುವ ಕ೦ಪನಿಯ ಘಟಕದಲ್ಲಿ 1.6 ಲಕ್ಷ ಟನ್ ತಾಮ್ರ ಉತ್ಪಾದನೆಯಾಗುತ್ತದೆ. 
ದೇಶದಲ್ಲಿ ಅತೀ ಹೆಚ್ಚಿನ ಪ್ರಮಾಣದ ತಾಮ್ರದ ಉತ್ಪಾದನೆ ಮಾಡುವ ಸಂಸ್ಥೆಗಳಲ್ಲಿ ಹಿಂದೂಸ್ತಾನ್ ಕಾಪರ್ ಲಿಮಿಟೆಡ್ ಸಂಸ್ಥೆಗೆ ಆಗ್ರ ಸ್ಥಾನ. ಈಗ ಸ್ಟೆರ್ಲೈಟ್ ಸಂಸ್ಥೆ ಮುಚ್ಚಿರುವ ಹಿನ್ನಲೆಯಲ್ಲಿ ದೇಶದಲ್ಲಿ ಸುಮಾರು 2 ಲಕ್ಷ ಟನ್ ತಾಮ್ರದ ಉತ್ಪಾದನೆಯ ಕೊರತೆ ಉಂಟಾಗಲಿದೆ. ಅಂತೆಯೇ ವಿದೇಶಗಳಿಂದ ಭವಿಷ್ಯದಲ್ಲಿ ಸುಮಾರು 2 ರಿಂದ 2.5 ಲಕ್ಷ ಟನ್ ಗಳಷ್ಟು ತಾಮ್ರವನ್ನು ಆಮದು ಮಾಡಿಕೊಳ್ಳುವ ಸಾಧ್ಯತೆ ಕೂಡ ಇದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
SCROLL FOR NEXT