ವಾಣಿಜ್ಯ

ಟಾಟಾ ಸಂಸ್ಥೆ ಜತೆ ಒಪ್ಪಂದ ವರದಿ ನಿಜವಲ್ಲ: ಜೆಟ್ ಏರ್ ವೇಸ್

Sumana Upadhyaya

ಮುಂಬೈ: ಜೆಟ್ ಏರ್ ವೇಸ್ ನ್ನು ಟಾಟಾ ಗ್ರೂಪ್ ಸಂಸ್ಥೆ ಖರೀದಿಸಲಿದೆ ಎಂಬ ಮಾಧ್ಯಮ ವರದಿ ಕೇವಲ ಊಹಾತ್ಮಕವಾದದ್ದು ಎಂದು ಜೆಟ್ ಏರ್ ವೇಸ್ ಸ್ಪಷ್ಟಪಡಿಸಿದೆ.

ಮಾಧ್ಯಮಗಳಲ್ಲಿ ಬಂದಿರುವ ವರದಿಗೆ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ವರದಿ ಕೇಳಿದಾಗ, ಜೆಟ್ ಏರ್ ವೇಸ್(ಇಂಡಿಯಾ), ಇದೊಂದು ಊಹೆಯ ವರದಿಯಾಗಿದ್ದು ಈ ಕುರಿತು ಬಹಿರಂಗಪಡಿಸಲು ಯಾವುದೇ ಚರ್ಚೆ ಮಾತುಕತೆಗಳು ನಡೆದಿಲ್ಲ ಎಂದು ತಿಳಿಸಿದೆ.

ಜೆಟ್ ಏರ್ ವೇಸ್ ನ ಮುಖ್ಯ ಹಣಕಾಸು ಅಧಿಕಾರಿ ಮತ್ತು ಉಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮಿತ್ ಅಗರ್ವಾಲ್ ಕೂಡ ಹೇಳಿಕೆ ನೀಡಿ ಇದೊಂದು ಕಪೋಲಕಲ್ಪಿತ ಸುದ್ದಿಯಾಗಿದ್ದು, ಈ ಕುರಿತು ಯಾವುದೇ ಸ್ಪಷ್ಟತೆ ಸಿಗದೆ ಹೇಳಿಕೆ ನೀಡುವುದಿಲ್ಲ ಎಂದರು.

ಊಹಾಪೋಹಗಳಿಗೆ ನಾವು ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಈ ಬಗ್ಗೆ ಏನಾದರೂ ನಿಖರವಾಗಿ ನಡೆದರೆ ನಾವು ಮಾತನಾಡಬಹುದು. ಇಲ್ಲದಿದ್ದರೆ ಇಂತಹ ಊಹಾಪೋಹ ಸುದ್ದಿಗಳಿಗೆ ಪ್ರತಿಕ್ರಿಯಿಸುವುದಿಲ್ಲ ಎಂದರು.

ಜೆಟ್ ಏರ್ ವೇಸ್ ಮಾಲಿಕ ನರೇಶ್ ಗೋಯಲ್ ಅವರಿಂದ ವಿಮಾನಯಾನ ಸಂಸ್ಥೆಯನ್ನು ಖರೀದಿಸುವ ಪ್ರಕ್ರಿಯೆಯಲ್ಲಿ ಟಾಟಾ ಗ್ರೂಪ್ ತೊಡಗಿದೆ ಎಂದು ಇದಕ್ಕೂ ಮುನ್ನ ಕೆಲ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಸುದ್ದಿಯ ಬಗ್ಗೆ ಬಾಂಬೆ ಸ್ಟಾಕ್ ಎಕ್ಸ್ ಜೇಂಜ್ ಸ್ಪಷ್ಟತೆಯನ್ನು ಕೋರಿತ್ತು.

ಪ್ರಸ್ತುತ ಜೆಟ್ ಏರ್ ವೇಸ್ ನಲ್ಲಿ ಗಲ್ಫ್ ಮೂಲದ ಎತಿಹಾಡ್ ಏರ್ ವೇಸ್ ಶೇಕಡಾ 24ರಷ್ಟು ಪಾಲನ್ನು ಹೊಂದಿದೆ. ಪ್ರಸ್ತುತ ಜೆಟ್ ಏರ್ ವೇಸ್ ನಷ್ಟದಲ್ಲಿ ನಡೆಯುತ್ತಿದೆ. ಕಳೆದ ಸೆಪ್ಟೆಂಬರ್ ತ್ರೈಮಾಸಿಕ ಅಂತ್ಯದಲ್ಲಿ ಸಾವಿರದ 261 ಕೋಟಿ ರೂಪಾಯಿ ನಷ್ಟ ಹೊಂದಿದೆ. ಅಧಿಕ ಇಂಧನ ಬೆಲೆ ಮತ್ತು ರೂಪಾಯಿ ಮೌಲ್ಯ ಕುಸಿತದಿಂದ ಸಂಸ್ಥೆ ನಷ್ಟ ಅನುಭವಿಸಿದೆ.

SCROLL FOR NEXT