ವಾಣಿಜ್ಯ

ಮಿಟೂ ಆರೋಪ: ಟಾಟಾ ಸನ್ಸ್ ನಿಂದ ಉದ್ಯಮಿ ಸುಹೆಲ್ ಸೇತ್ ವಜಾ

Sumana Upadhyaya

ನವದೆಹಲಿ: ಮಿಟೂ ಇದೀಗ ಕಾರ್ಪೊರೇಟ್ ಕಂಪೆನಿಗೂ ಕಾಲಿಟ್ಟಿದೆ. ಹಲವು ಮಹಿಳೆಯರು ಮಿಟೂ ಚಳವಳಿಯಡಿ ಲೈಂಗಿಕ ಕಿರುಕುಳ ದೂರು ನೀಡಿರುವ ಹಿನ್ನಲೆಯಲ್ಲಿ ಟಾಟಾ ಸನ್ಸ್ ಅದರ ಬ್ರಾಂಡ್ ಸಲಹೆಗಾರ ಸುಹೆಲ್ ಸೇತ್ ಅವರನ್ನು ಸೇವೆಯಿಂದ ವಜಾಗೊಳಿಸಿದೆ.

ಮುಂದಿನ ತಿಂಗಳು ನವೆಂಬರ್ 30ರಂದು ಟಾಟಾ ಸನ್ಸ್ ನಲ್ಲಿ ಸೇತ್ ಅವರ ಒಪ್ಪಂದ ಅವಧಿ ಮುಗಿಯಲಿದ್ದು, ಅವರ ಸೇವೆಯನ್ನು ಮುಂದುವರಿಸದಿರಲು ಕಂಪೆನಿ ನಿರ್ಧರಿಸಿದೆ. ಸೇತ್ ಅವರ ಮಾರ್ಕೆಟಿಂಗ್ ಕಂಪೆನಿ ಕೌನ್ಸೆಲೇಜ್ ಜೊತೆಗಿನ ಸಹಯೋಗವನ್ನು ಪರಾಮರ್ಶಿಸಿದ ನಂತರ ಟಾಟಾ ಗ್ರೂಪ್ ಈ ನಿರ್ಧಾರ ಕೈಗೊಂಡಿದೆ.

ರೂಪದರ್ಶಿ ದಿಯಾಂದ್ರ ಸೊರೆಸ್, ಚಿತ್ರ ನಿರ್ದೇಶಕಿ ನತಾಶ ರಾಥೋಡ್ ಮತ್ತು ಬರಹಗಾರ್ತಿ ಇರಾ ತ್ರಿವೇದಿ ಸೇರಿದಂತೆ ಆರು ಮಂದಿ ಮಹಿಳೆಯರು ಸೇತ್ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು.

ಟಾಟಾ ಸನ್ಸ್ ಜೊತೆ ಕೌನ್ಸೆಲೇಜ್ ಒಪ್ಪಂದ ಅವಧಿ ನವೆಂಬರ್ 30ಕ್ಕೆ ಮುಕ್ತಾಯವಾಗಲಿದೆ ಎಂದು ಟಾಟಾ ಸನ್ಸ್ ವಕ್ತಾರರು ತಿಳಿಸಿದ್ದಾರೆ. ಸೇತ್ ವಿರುದ್ಧ ಆರೋಪ ಬಲವಾಗಿ ಕೇಳಿಬಂದಿರುವುದರಿಂದ ಒಪ್ಪಂದವನ್ನು ಕೊನೆಗೊಳಿಸಲು ಟಾಟಾ ದೃಢವಾಗಿ ನಿಶ್ಚಯಿಸಿದೆ ಎಂದು ಕಂಪೆನಿ ತಿಳಿಸಿದೆ.

2016ರಲ್ಲಿ ಆಡಳಿತ ಮಂಡಳಿಯಲ್ಲಿ ಬಿಕ್ಕಟ್ಟು ಉಲ್ಭಣಿಸಿ ಸೈರಸ್ ಮಿಸ್ಟ್ರಿ ಅವರನ್ನು ಟಾಟಾ ಸನ್ಸ್ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದಾಗ 55 ವರ್ಷದ ಸುಹೆಲ್ ಸೇತ್ ಟಾಟಾ ಬ್ರಾಂಡ್ ಮರು ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಟಾಟಾ ಸನ್ಸ್ ಹೊರತುಪಡಿಸಿ, ಸೇತ್ ಅವ ಕೌನ್ಸೆಲೇಟ್ ಕಂಪೆನಿಗೆ ಕೋಕಾ ಕೋಲ, ಜೆಟ್ ಏರ್ ವೇಸ್ ಮತ್ತು ದೆಹಲಿ ಸರ್ಕಾರ ಕೂಡ ಗ್ರಾಹಕವಾಗಿವೆ.

SCROLL FOR NEXT