ಹಾಂಕಾಂಗ್: ವಸ್ತುಗಳ ದರ ನಿಗದಿಯಲ್ಲಿ ಚೀನಾ ವಿರುದ್ಧ ಅಮೆರಿಕಾದ ಡೊನಾಲ್ಡ್ ಟ್ರಂಪ್ ಸರ್ಕಾರ ಮತ್ತೊಂದು ಸುತ್ತಿನ ವ್ಯಾಪಾರ ಕದನ(ಟ್ರೇಡ್ ವಾರ್)ಕ್ಕೆ ಸಜ್ಜಾಗುತ್ತಿದೆ ಎಂಬ ವಿಷಯ ಬಹಿರಂಗವಾಗುತ್ತಿದ್ದಂತೆ ಏಷ್ಯಾ ಮಾರುಕಟ್ಟೆಯ ಸೋಮವಾರದ ವಹಿವಾಟು ಮತ್ತೆ ಕುಸಿದಿದೆ. ವಿಶ್ವದ ಎರಡು ಪ್ರಬಲ ಆರ್ಥಿಕ ದೇಶಗಳಾದ ಅಮೆರಿಕಾ ಮತ್ತು ಚೀನಾ ದರ ಸಮರದಲ್ಲಿ ಮುಳುಗಿರುವುದು ಇಡೀ ವಿಶ್ವದ ಮೇಲೆ ಪರಿಣಾಮ ಉಂಟುಮಾಡುತ್ತಿದೆ.
ಅಮೆರಿಕಾದ ವಾಷಿಂಗ್ಟನ್ ಪೋಸ್ಟ್ ಮತ್ತು ವಾಲ್ ಸ್ಟ್ರೀಟ್ ಜರ್ನಲ್ ಹೇಳುವ ಪ್ರಕಾರ, ಡೊನಾಲ್ಡ್ ಟ್ರಂಪ್ ಅವರು ಚೀನಾದಿಂದ ಆಮದಾಗುವ ವಸ್ತುಗಳ ಮೇಲೆ ಶೇಕಡಾ 10ರಷ್ಟು ತೆರಿಗೆ ವಿಧಿಸಲು ಮುಂದಾಗಿದ್ದು ಮುಂದಿನ ದಿನಗಳಲ್ಲಿ ಅದು ಘೋಷಣೆಯಾಗಲಿದೆ ಎಂದು ವರದಿ ಮಾಡಿದೆ.
ಈಗಾಗಲೇ ಕಳೆದ ಬೇಸಿಗೆಯಲ್ಲಿ ಅಮೆರಿಕಾ 50 ಶತಕೋಟಿ ಡಾಲರ್ ನಷ್ಟು ಚೀನಾದಿಂದ ಆಮದು ವಸ್ತುಗಳ ಮೇಲೆ ತೆರಿಗೆ ವಿಧಿಸಿದ್ದು ಚೀನಾದಿಂದ ಆಮದಾಗುವ ಅರ್ಧದಷ್ಟು ವಸ್ತುಗಳ ಮೇಲೆ ತೆರಿಗೆ ಹಾಕಲಾಗುತ್ತಿದೆ. ಇದಕ್ಕೆ ತಕ್ಕ ಪ್ರತ್ಯುತ್ತರ ನೀಡುವುದಾಗಿ ಈಗಾಗಲೇ ಚೀನಾ ಕೂಡ ಎಚ್ಚರಿಕೆ ನೀಡಿದೆ.
ಅಮೆರಿಕಾ-ಚೀನಾಗಳ ನಡುವಿನ ವ್ಯಾಪಾರ ಕದನದಿಂದಾಗಿ ಹಾಂಕಾಂಗ್ ಷೇರು ವಹಿವಾಟು ಮಾರುಕಟ್ಟೆಯಲ್ಲಿ ಇಂದು ಶೇಕಡಾ 1.6ರಷ್ಟು ಮತ್ತು ಶಾಂಘೈ ಮಾರುಕಟ್ಟೆಯಲ್ಲಿ ಶೇಕಡಾ 0.8ರಷ್ಟು ಕುಸಿತ ಕಂಡುಬಂದಿದೆ. ಸಿಯೊಲ್ ಮತ್ತು ಸಿಂಗಾಪುರ್ ಗಳಲ್ಲಿ ತಲಾ 0.7ರಷ್ಟು, ವೆಲ್ಲಿಂಗ್ಟನ್ ಮತ್ತು ತೈಪಿಗಳಲ್ಲಿ ಕೂಡ ಬಹುದೊಡ್ಡ ನಷ್ಟ ಕಂಡುಬಂದರೆ ಸಿಡ್ನಿಯಲ್ಲಿ ಮಾತ್ರ 0.3 ಶೇಕಡಾದಷ್ಟು ಏರಿಕೆಯಾಗಿದೆ. ಟೋಕ್ಯೋ ಷೇರು ಮಾರುಕಟ್ಟೆ ಇಂದು ಮುಚ್ಚಿದೆ.