ಮೇಕ್ ಇನ್ ಇಂಡಿಯಾಗೆ ಭರ್ಜರಿ ಬೇಡಿಕೆ: ಅಮೆರಿಕದ 200 ಸಂಸ್ಥೆಗಳು ಚೀನಾದಿಂದ ಭಾರತಕ್ಕೆ ಸ್ಥಳಾಂತರ!?
ವಾಷಿಂಗ್ ಟನ್: ಅಮೆರಿಕದ 200 ಕ್ಕೂ ಹೆಚ್ಚು ಸಂಸ್ಥೆಗಳು ತಮ್ಮ ಉತ್ಪಾದನಾ ಘಟಕಗಳನ್ನು ಚೀನಾದಿಂದ ಭಾರತಕ್ಕೆ ಸ್ಥಳಾಂತರಿಸುವ ಆಯ್ಕೆಯನ್ನು ಗಂಭೀರವಾಗಿ ಪರಿಗಣಿಸಿವೆ.
ಅಮೆರಿಕ- ಭಾರತ ಕಾರ್ಯತಂತ್ರ ಹಾಗೂ ಪಾಲುದಾರಿಕಾ ವೇದಿಕೆ (USISPF)ಯ ಅಧ್ಯಕ್ಷ ಮುಖೇಶ್ ಅಘಿ ಈ ಬಗ್ಗೆ ಮಾತನಾಡಿದ್ದು, ಭಾರತದಲ್ಲಿ ಹೂಡಿಕೆ ಮಾಡುವ ಮೂಲಕ ಚೀನಾಗೆ ಪರ್ಯಾಯವನ್ನು ಹುಟ್ಟುಹಾಕುವುದರ ಬಗ್ಗೆ ಅಮೆರಿಕ ಸಂಸ್ಥೆಗಳು ತಮ್ಮ ಸಂಘಟನೆಯನ್ನು ಸಂಪರ್ಕಿಸಿವೆ ಎಂದು ಹೇಳಿದ್ದಾರೆ.
"ಸಿಸ್ಕೋ ಸೇರಿದಂತೆ ನಮ್ಮ ಸಂಘಟನೆಯ ಸದಸ್ಯರಾಗಿರುವ ಅಮೆರಿಕದ 200 ಕಂಪನಿಗಳು, ಭಾರತ ಉತ್ಪಾದನಾ ಹಬ್ ಆಗಬೇಕಾದರೆ ಅಗತ್ಯವಾಗಿ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ವಿವರಣೆ ನೀಡಿವೆ. ಭಾರತಕ್ಕೆ ಈ ಸಂಸ್ಥೆಗಳ ಉತ್ಪಾದನಾ ಘಟಗಳನ್ನು ಸ್ಥಳಾಂತರಿಸಿ ಚೀನಾಗೆ ಪರ್ಯಾಯವಾದ ಉತ್ಪಾದನಾ ಹಬ್ ನ್ನು ಸೃಷ್ಟಿಸುವುದರ ಬಗ್ಗೆ ಭಾರತದ ಚುನಾವಣೆ ನಂತರ ಸಲಹೆಗಳನ್ನು ಭಾರತಕ್ಕೆ ಶಿಫಾರಸ್ಸು ಮಾಡಲಿದ್ದೇವೆ ಎಂದು ಮುಖೇಶ್ ಅಘಿ ಮಾಹಿತಿ ನೀಡಿದ್ದಾರೆ.
ಅಮೆರಿಕ ಕಂಪನಿಗಳು ಸಂಸ್ಥೆಗಳು ಚೀನಾದಿಂದ ಭಾರತಕ್ಕೆ ಉತ್ಪಾದನಾ ಘಟಕಗಳನ್ನು ಸ್ಥಳಾಂತರಿಸಲು ಚಿಂತನೆ ನಡೆಸಿವೆ. ಈ ನಿಟ್ಟಿನಲ್ಲಿ ಭಾರತದಲ್ಲಿ ಅಸ್ತಿತ್ವಕ್ಕೆ ಬರಲಿರುವ ಹೊಸ ಸರ್ಕಾರಕ್ಕೆ ಮುಖೇಶ್ ಅಘಿ ಸಲಹೆ ನೀಡಿದ್ದು, ಸುಧಾರಣೆಗಳನ್ನು ಮತ್ತಷ್ಟು ತೀವ್ರಗೊಳಿಸಿ, ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಗಳಲ್ಲಿ ಮತ್ತಷ್ಟು ಪಾರದರ್ಶಕತೆ ಕಾಯ್ದುಕೊಳ್ಳಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.
ಭೂಸ್ವಾಧೀನ ವಿಷಯಗಳಿಂದ ಹಿಡಿದು ಸೀಮಾ ಸುಂಕದ ವರೆಗೂ ಪ್ರತಿಯೊಂದು ವಿಷಯದಲ್ಲಿಯೂ ಮತ್ತಷ್ಟು ಸುಧಾರಣೆ ಹಾಗೂ ಪಾರದರ್ಶಕತೆ ಅಗತ್ಯವಿದೆ, ಇದರಿಂದಾಗಿ ಉದ್ಯೋಗಗಳೂ ಸೃಷ್ಟಿಯಾಗುತ್ತವೆ ಎಂದು ಅಘಿ ಹೇಳಿದ್ದಾರೆ.
ಇದೇ ವೇಳೆ ಅಮೆರಿಕ-ಭಾರತದ ನಡುವೆ ಮುಕ್ತ ವ್ಯಾಪಾರ ಒಪ್ಪಂದ (ಎಫ್ ಟಿಎ) ಪರ ಮಾತನಾಡಿರುವ ಮುಖೇಶ್ ಅಘಿ, ಎಫ್ ಟಿಎ ಇಂದಾಗಿ ಭಾರತಕ್ಕೆ ಒಳಿತಾಗಲಿದೆ. ಎಫ್ ಟಿಎ ಪರಿಣಾಮ ಚೀನಾದಿಂದ ಭಾರತಕ್ಕೆ ಬರುವ ಅಗ್ಗದ ಸರಕುಗಳಿಗೆ ಕಡಿವಾಣ ಬೀಳಲಿದೆ, ಈ ಕಾರಣದಿಂದ ಎಫ್ ಟಿಎ ಬಗ್ಗೆ ಉಭಯ ದೇಶಗಳೂ ಚಿಂತನೆ ನಡೆಸಬೇಕಿದೆ ಎಂದು ಮುಖೇಶ್ ಅಘಿ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos