ವಾಣಿಜ್ಯ

ಬಾಗಲಕೋಟೆ ಮಾರುಕಟ್ಟೆಗೆ ಹೊರ ರಾಜ್ಯ ಖರೀದಿದಾರರ ಲಗ್ಗೆ

Srinivas Rao BV

ಬಾಗಲಕೋಟೆ: ದೇಶದಾದ್ಯಂತ ಈರುಳ್ಳಿ ಬೇಡಿಕೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬಾಗಲಕೋಟೆ ಎಪಿಎಂಸಿ ಮಾರುಕಟ್ಟೆಗೆ ಹೊರ ರಾಜ್ಯಗಳ ಖರೀದಿದಾರರು ಈರುಳ್ಳಿ ಖರೀದಿಸಲು ಲಗ್ಗೆ ಇಟ್ಟಿದ್ದಾರೆ.

ಈರುಳ್ಳಿ ಮಾರುಕಟ್ಟೆಗೆ ಹೆಸರಾಗಿರುವ ಬಾಗಲಕೋಟೆ ಎಪಿಎಂಸಿಗೂ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಮಾರಾಟಕ್ಕೆ ಬರುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಖರೀದಿಸಬಹುದು ಎನ್ನುವ ಲೆಕ್ಕಾಚಾರದಲ್ಲಿ ಮಹಾರಾಷ್ಟ, ತಮೀಳುನಾಡು, ಆಂಧ್ರಪ್ರದೇಶ ಹಾಗೂ ಬೆಂಗಳೂರಿನಿಂದ ಸಗಟು ಖರೀದಿದಾರರು ಆಗಮಿಸಿ ಠಿಕಾಣಿ ಹೂಡಿದ್ದಾರೆ.

ಈರುಳ್ಳಿಗೆ ಭಾರಿ ಬೇಡಿಕೆ ಉಂಟಾದ ಹಿನ್ನೆಲೆಯಲ್ಲಿ ವಾರದಲ್ಲಿ ಎರಡು ಬಾರಿ ಮಾತ್ರ ನಡೆಯುತ್ತಿದ್ದ ಈರುಳ್ಳಿ ಮಾರಾಟ( ಟೆಂಡರ್) ಈಗ ವಾರದಲ್ಲಿ ಮೂರು ದಿನ ನಡೆಯುತ್ತಿದೆ. ಖರೀದಿದಾರರ ನಿರೀಕ್ಷೆಯಂತೆ ಮಾರುಕಟ್ಟೆಗೆ ಈರುಳ್ಳಿ ಬರುತ್ತಿಲ್ಲ. ಬರುವ ಈರುಳ್ಳಿ ಗುಣಮಟ್ಟದ್ದಾಗಿಲ್ಲ. ರೈತರು ಅವುಗಳನ್ನು ಗ್ರೇಡಿಂಗ್ ಮಾಡಿಕೊಂಡು ಬರುತ್ತಿಲ್ಲ. ಪರಿಣಾಮವಾಗಿ ಬಹುತೇಕ ರೈತರಿಗೆ ಹೆಚ್ಚಿನ ಬೆಲೆ ಸಿಕ್ಕುತ್ತಿಲ್ಲ.

ರೈತರು ತರುವ ಗುಣಮಟ್ಟದ ಈರುಳ್ಳಿಗೆ ಭಾರಿ ಬೇಡಿಕೆ ಉಂಟಾಗಿದೆ. ಪ್ರತಿ ಕ್ವಿಂಟಾಲ್ ಗುಣಮಟ್ಟದ ಈರುಳ್ಳಿ 7 ಸಾವಿರದಿಂದ 8,೦೦೦ ರೂ.ವರೆಗೆ ಮಾರಾಟ ಆಗುತ್ತಿದೆ. ಬಾಗಲಕೋಟೆ ಎಪಿಎಂಸಿಯಲ್ಲಿ ನವೆಂಬರ್ ತಿಂಗಳಿನಲ್ಲಿ 45,840 ಕ್ವಾಂಟಾಲ್ ಈರುಳ್ಳಿ ಮಾರಾಟವಾಗಿದೆ.

ಈರುಳ್ಳಿ ಬೆಳೆಯುವ ಪ್ರಮುಖ ರಾಜ್ಯಗಳಾದ ಮಹಾರಾಷ್ಟç, ಕರ್ನಾಟಕದಲ್ಲಿ ಈ ಬಾರಿ ಸತತ ಮಳೆ ಮತ್ತು ಪ್ರವಾಹ ಸ್ಥಿತಿ ಉಂಟಾಗಿದ್ದರಿAದ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆ ಬಾರದೆ ನೀರು ಪಾಲಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಶೇ. 70 ಈರುಳ್ಳಿ ಹಾನಿಗೀಡಾಗಿದೆ. ಶೇ. 50 ರಿಂದ 55 ರಷ್ಟು ನೀರು ಪಾಲಾಗಿದ್ದು, ಉಳಿದ ಶೇ.10 ರಿಂದ 15 ರಷ್ಟು ನೀರು ನಿಂತು ಕೊಳೆತು ಹೋಗಿದೆ. ಹೀಗೆ ಉಳಿದ ಕಡೆಗಳಲ್ಲೂ ಈರುಳ್ಳಿ ನೆರೆ ಮತ್ತು ಮಳೆಗೆ ಸಿಕ್ಕು ಹಾಳಾಗಿದೆ. ಪರಿಣಾಮವಾಗಿ ಇಂದು ದೇಶದಲ್ಲಿ ಗುಣಮಟ್ಟದ ಈರುಳ್ಳಿಗೆ ಭಾರಿ ಬೇಡಿಕೆ ಉಂಟಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಈರುಳ್ಳಿ ಬೆಲೆ ಕೆಜಿಗೆ 100 ರಿಂದ 130ರೂ.ಗೆ ಮಾರಾಟವಾಗುತ್ತಿದೆ.

ಬಾಗಲಕೋಟೆ ಎಪಿಎಂಸಿಗೆ ಹೊರರಾಜ್ಯಗಳ ಖರೀದಿದಾರರು ಈರುಳ್ಳಿ ಖರೀದಿಗೆ ಆಗಮಿಸಿರುವುದರಿಂದ ಜಿಲ್ಲೆಯ ಹಾಗೂ ಅಕ್ಕಪಕ್ಕದ ಜಿಲ್ಲೆಯ ಈರುಳ್ಳಿ ಬೆಳೆಗಾರರು ತಮ್ಮ ಉತ್ಪನ್ನವನ್ನು ತರುತ್ತಿದ್ದಾರಾದರೂ ನಿರೀಕ್ಷಿತ ಪ್ರಮಾಣದಲ್ಲಿ ಗುಣಮಟ್ಟದ ಈರುಳ್ಳಿ ಬರುತ್ತಿಲ್ಲ. ಗುಣಮಟ್ಟದ ಈರುಳ್ಳಿಗಾಗಿ ಖರೀದಿದಾರರು ಛಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಬಾಗಲಕೋಟೆ ಜಿಲ್ಲೆ ಈರುಳ್ಳಿ ಬೆಳೆಗೆ ಹೆಸರಾದ ಜಿಲ್ಲೆ. ಸತತ ಮಳೆ ಮತ್ತು ಪ್ರವಾಹದ ಮಧ್ಯೆ ಶೇಕಡಾ 30 ರಿಂದ 40ರಷ್ಟು ಮಾತ್ರ ಈರುಳ್ಳಿ ಬೆಳೆ ರೈತರ ಕೈಗೆಟುಕಿದೆ. ಅದರಲ್ಲಿಯೇ ಈಗ ಸಾಕಷ್ಟು ಈರುಳ್ಳಿಯನ್ನು ರೈತರು ಹುಬ್ಬಳ್ಳಿ ಮತ್ತು ಬೆಂಗಳೂರು ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದಾರೆ. ಹಾಗಿದ್ದೂ ನೆರೆ ರಾಜ್ಯಗಳ ಖರೀದಿದಾರು ಆಗಮಿಸಿರುವುದು ಈರುಳ್ಳಿ ಬೆಳೆಗಾರರಲ್ಲಿ ಹರ್ಷವನ್ನುಂಟು ಮಾಡಿದೆ.
 

ವರದಿ: ವಿಠ್ಠಲ ಆರ್.ಬಲಕುಂದಿ

SCROLL FOR NEXT