ವಾಣಿಜ್ಯ

ವಿಜಯಾ ಬ್ಯಾಂಕು ವಿಲೀನ ಪ್ರಶ್ನಿಸಿ ಕೋರ್ಟ್ ಗೆ ಮೊರೆ; ಫೆ.13ಕ್ಕೆ ಅರ್ಜಿ ವಿಚಾರಣೆ

Sumana Upadhyaya

ಬೆಂಗಳೂರು: ವಿಜಯಾ ಬ್ಯಾಂಕ್, ದೇನಾ ಬ್ಯಾಂಕು ಮತ್ತು ಬ್ಯಾಂಕ್ ಆಫ್ ಬರೋಡಾ ಬ್ಯಾಂಕುಗಳ ವಿಲೀನ ಏಪ್ರಿಲ್ 1ರಿಂದ ಜಾರಿಗೆ ಬರಲಿದ್ದು, ಇತ್ತ ಅಖಿಲ ಭಾರತ ಬ್ಯಾಂಕು ಅಧಿಕಾರಿಗಳ ಸಂಘ ಮತ್ತು ಅಖಿಲ ಭಾರತ ವಿಜಯಾ ಬ್ಯಾಂಕು ಅಧಿಕಾರಿಗಳ ಒಕ್ಕೂಟ ವಿಲೀನದಿಂದ ಸಾವಿರಾರು ನೌಕರರ ಮೂಲಭೂತ ಹಕ್ಕುಗಳಿಗೆ ತೊಂದರೆಯಾಗುತ್ತದೆ ಎಂದು ದೆಹಲಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದೆ.

ಈ ಸಂಬಂಧ ಇತ್ತೀಚೆಗೆ ದೆಹಲಿ ಹೈಕೋರ್ಟ್ ನ ನ್ಯಾಯಾಧೀಶ ಎಸ್ ರವೀಂದ್ರ ಭಟ್ ನೇತೃತ್ವದ ನ್ಯಾಯಪೀಠ ಹಣಕಾಸು ಸಚಿವಾಲಯ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ದೇನಾ ಬ್ಯಾಂಕು ಮತ್ತು ವಿಜಯಾ ಬ್ಯಾಂಕಿಗೆ ನೊಟೀಸ್ ಜಾರಿ ಮಾಡಿದೆ.
 
ಇದೇ ತಿಂಗಳ 13ರಂದು ಅರ್ಜಿ ವಿಚಾರಣೆಗೆ ಬರಲಿದೆ. ಆರ್ ಬಿ ಮತ್ತು ಬ್ಯಾಂಕು ನೌಕರರ ಸಲಹೆ ಪಡೆಯದೆ ಸರ್ಕಾರ ಬ್ಯಾಂಕುಗಳನ್ನು ವಿಲೀನಗೊಳಿಸಿದೆ ಎಂದು ಒಕ್ಕೂಟ ಆರೋಪಿಸಿದೆ.

ವಿಜಯಾ ಬ್ಯಾಂಕು ನಿಯಮಿತವಾಗಿ ಲಾಭ ತಂದುಕೊಡುತ್ತಿತ್ತು. ದೇನಾ ಬ್ಯಾಂಕು ಮತ್ತು ಬ್ಯಾಂಕ್ ಆಫ್ ಬರೋಡಾ ಜೊತೆಗೆ ಒಮ್ಮೆಗೇ ವಿಲೀನ ಮಾಡಿದಾಗ ಅದು ಹತ್ತಾರು ಸಮಸ್ಯೆಯನ್ನು ಸೃಷ್ಟಿಸುತ್ತದೆ. ನಮಗೆ ಇದರಿಂದ ಬೇಸರವಾಗಿದೆ. ನೌಕರರಲ್ಲಿ ಕೆಲಸ ಮಾಡುವ ಉತ್ಸಾಹ ಕಡಿಮೆಯಾಗುತ್ತದೆ ಎಂದು ಅಖಿಲ ಭಾರತ ವಿಜಯಾ ಬ್ಯಾಂಕು ಅಧಿಕಾರಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ರಾವ್ ಹೇಳುತ್ತಾರೆ.

ಅಖಿಲ ಭಾರತ ಬ್ಯಾಂಕು ಅಧಿಕಾರಿಗಳ ಒಕ್ಕೂಟದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೌಮ್ಯ ದತ್ತಾ, ಸರ್ಕಾರದ ಹಲವು ಮಹಾತ್ವಾಕಾಂಕ್ಷಿ ಯೋಜನೆಗಳನ್ನು ಮುನ್ನಡೆಸಲು ಇಂದು ಹೆಚ್ಚೆಚ್ಚು ಸಾರ್ವಜನಿಕ ವಲಯ ಬ್ಯಾಂಕುಗಳ ಅವಶ್ಯಕತೆಯಿದೆ. ಮೂರು ಬ್ಯಾಂಕುಗಳ ವಿಲೀನಮಾಡುವ ಬದಲು ಸಾಲ ಹಿಂತಿರುಗಿಸದವರು, ಆರ್ಥಿಕ ಅಪರಾಧಿಗಳನ್ನು ಶಿಕ್ಷಿಸಿ ಅವರಿಂದ ಶೇಕಡಾ 20ರಷ್ಟಾದರೂ ಹಣ ವಸೂಲಿ ಮಾಡಿದರೆ ಎಲ್ಲಾ ಸಾರ್ವಜನಿಕ ವಲಯ ಬ್ಯಾಂಕುಗಳು ಉತ್ತಮವಾಗಿ ಕಾರ್ಯನಿರ್ವಹಿಸಬಹುದು ಎನ್ನುತ್ತಾರೆ.

SCROLL FOR NEXT