ವಾಣಿಜ್ಯ

ಸಾಲ ವಸೂಲಿಗೆ ಬ್ಯಾಂಕ್ ಗಳು ಬೌನ್ಸರ್ ಗಳನ್ನು ನೇಮಿಸಿಕೊಳ್ಳುವ ಅಧಿಕಾರ ಇಲ್ಲ: ಕೇಂದ್ರ ಸರ್ಕಾರ

Lingaraj Badiger
ನವದೆಹಲಿ: ಸಾಲಗಾರರಿಂದ ಬಲವಂತದಿಂದ ಸಾಲ ವಸೂಲಿ ಮಾಡಲು ಬೌನ್ಸರ್ ಗಳನ್ನು ನೇಮಿಸಿಕೊಳ್ಳುವ ಅಧಿಕಾರ ಯಾವುದೇ ಬ್ಯಾಂಕುಗಳಿಗೆ ಇಲ್ಲ ಎಂದು ಸರ್ಕಾರ ಸೋಮವಾರ ಲೋಕಸಭೆಗೆ ತಿಳಿಸಿದೆ.
ಪ್ರಶ್ನೋತ್ತರ ಅವಧಿಯಲ್ಲಿ, ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್, ಸಾಲಗಾರರೊಂದಿಗೆ ಬ್ಯಾಂಕುಗಳು ದುರ್ವತನೆ ತೋರುವುದನ್ನು ತಡೆಯಲು, ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾಲಗಾರರೊಂದಿಗೆ ಬ್ಯಾಂಕುಗಳು ನ್ಯಾಯಯುತವಾಗಿ ವರ್ತಿಸಬೇಕು ಎಂಬುದನ್ನು ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಿದೆ ಎಂದು ಸಚಿವರು ಉತ್ತರಿಸಿದರು.
ಬ್ಯಾಂಕುಗಳು ಸಾಲಗಾರರೊಂದಿಗೆ ನ್ಯಾಯಯುತ ವರ್ತನೆ ಸಂಬಂಧ ಆರ್ ಬಿ ಐ ಮಾರ್ಗಸೂಚಿ ಹೊರಡಿಸಿದ್ದು, ಬ್ಯಾಂಕುಗಳು ಅವುಗಳನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಸಚಿವರು ಮತ್ತೊಂದು ಪ್ರಶ್ನೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. 
ಬ್ಯಾಂಕುಗಳು ಸಾಲವಸೂಲಿ ಮಾಡುವಾಗ ಸಾಲಿಗರ ಮೇಲೆ ಅನಗತ್ಯ ಹಿಂಸೆ ನೀಡುವುದನ್ನು, ಸಾಲ ಮರುಪಡೆಯಲು ಬಲ ಪ್ರಯೋಗ ಇತ್ಯಾದಿಗಳನ್ನು ನಿಷೇಧಿಸಿ ಸುತ್ತೋಲೆ ಹೊರಡಿಸಿದೆ ಎಂದು ಹೇಳಿದರು.
ತನ್ನ ಮಾರ್ಗಸೂಚಿಗಳನ್ನು ಪಾಲಿಸದೇ ಸಾಲವಸೂಲಿಗಾಗಿ ನಿಂದನೀಯ ಮಾರ್ಗಗಳನ್ನು ಅನುಸರಿಸುತ್ತಿರುವ ಬ್ಯಾಂಕುಗಳ ವಿರುದ್ಧದ ದೂರುಗಳನ್ನು ಗಂಭೀರವಾಗಿ ಪರಿಗಣಿಸುವುದಾಗಿ ಆರ್ ಬಿಐ ಎಚ್ಚರಿಕೆ ನೀಡಿದೆ ಎಂದು ಸಚಿವರು ವಿವರಿಸಿದರು.
SCROLL FOR NEXT