ನವದೆಹಲಿ: ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಸುದ್ದಿಯಾಗಿದ್ದ ಸರ್ಕಾರಿ ಸ್ವಾಮ್ಯದ ದೂರವಾಣಿ ಸಂಪರ್ಕ ಸಂಸ್ಥೆ ಬಿಎಸ್ಎನ್ಎಲ್ ಮಾರುಕಟ್ಟೆಯಲ್ಲಿ ಭರ್ಜರಿ ಪೈಪೋಟಿ ನೀಡಲು ಸಜ್ಜಾಗಿದ್ದು, ಇದೀಗ ಬಿಎಸ್ಎನ್ಎಲ್ ಲ್ಯಾಂಡ್ ಲೈನ್ ಗ್ರಾಹಕರಿಗೆ ಉಚಿತ ವೈಫೈ ಸೇವೆ ನೀಡುವ ಕುರಿತು ಘೋಷಣೆ ಮಾಡಿದೆ.
ಎಲ್ಲಾ ಲ್ಯಾಂಡ್ ಲೈನ್ ಫೋನ್ ಬಳಸುತ್ತಿರುವ ಗ್ರಾಹಕರಿಗಾಗಿ ಉಚಿತ ಬ್ರಾಡ್ಬ್ಯಾಂಡ್ ಸೇವೆಯನ್ನು ಒದಗಿಸಲು ಬಿಎಸ್ಎನ್ಎಲ್ ಮುಂದಾಗಿದ್ದು, ಲ್ಯಾಂಡ್ ಲೈನ್ ಗ್ರಾಹಕರು ಉಚಿತವಾಗಿ ಹೈಸ್ಪೀಡ್ ಹೋಮ್ ವೈಫೈ ಸೇವೆಯನ್ನು ಪಡೆಯಬಹುದಾಗಿದೆ. ಗ್ರಾಹಕರು ದಿನಕ್ಕೆ 10 ಎಂಬಿಪಿಎಸ್ ವೇಗದಲ್ಲಿ 5 ಜಿಬಿ ಡೇಟಾವನ್ನು ಡೌನ್ಲೋಡ್ ಮಾಡುವ ಅವಕಾಶವನ್ನು ಬಿಎಸ್ಎನ್ಎಲ್ ಸಂಸ್ಥೆ ಒದಗಿಸುತ್ತಿದೆ.
ಇದರ ಜೊತೆಗೆ ಬಿಎಸ್ಎನ್ಎಲ್ ಸಂಸ್ಥೆ ಲ್ಯಾಂಡ್ ಲೈನ್ ಮತ್ತು ಮೊಬೈಲ್ ಗ್ರಾಹಕರಿಗೆ 'ಫ್ರಿ ವಾಯ್ಸ್ ಕಾಲಿಂಗ್' ಸೇವೆಯನ್ನು ಒದಗಿಸುತ್ತಿದೆ. ‘ವಿಂಗ್ಸ್‘ ವಿಒಐಪಿ ಪ್ಲಾಟ್ ಫಾರಂ ಮೂಲಕ ಈ ಸೇವೆ ದೊರಕಲಿದೆ. ಗ್ರಾಹಕರು ವೈಫೈ ಸೇವೆಯನ್ನು ಪಡೆಯಲು ಕೇವಲ ಒಂದು ಕರೆ ಮಾಡಿದರೆ ಸಾಕು. ಬಿಎಸ್ಎನ್ಎಲ್ ನೀಡಿರುವ 18003451504 ಸಂಖ್ಯೆಗೆ ಕರೆ ಮಾಡುವ ಮೂಲಕ ಈ ಯೋಜನೆಯನ್ನು ಪಡೆಯಬಹುದಾಗಿದೆ. ಹೋಮ್ ವೈಫೈ ಇನ್ಸ್ಟಾಲ್ ಮಾಡಲು ಯಾವುದೇ ಶುಲ್ಕವಿಲ್ಲ ಎಂದು ಬಿಎಸ್ಎನ್ಎಲ್ ಸಂಸ್ಥೆ ತಿಳಿಸಿದೆ.