ವಾಣಿಜ್ಯ

ಜೆಟ್ ಏರ್ ವೇಸ್ ಸ್ಥಾಪಕ ನರೇಶ್ ಗೋಯಲ್, ಪತ್ನಿ ಅನಿತಾ ರಾಜೀನಾಮೆ

Lingaraj Badiger
ನವದೆಹಲಿ: ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಜೆಟ್ ಏರ್ ವೇಸ್ ಸಂಸ್ಥೆ ಸ್ಥಾಪಕ ಹಾಗೂ ಅಧ್ಯಕ್ಷ ನರೇಶ್ ಗೋಯಲ್ ಮತ್ತು ಅವರ ಪತ್ನಿ ಅನಿತಾ ಗೋಯಲ್ ಅವರು ಸೋಮವಾರ ವಿಮಾನಯಾನ ಸಂಸ್ಥೆಯ ಆಡಳಿತ ಮಂಡಳಿಗೆ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ತಾವೇ ಹುಟ್ಟುಹಾಕಿದ ಜೆಟ್ ಏರ್​ವೇಸ್ ನಿಂದ ಗೋಯಲ್ ದಂಪತಿ ಹೊರಬಂದಿದ್ದಾರೆ.
1993ರಲ್ಲಿ, 25 ವರ್ಷಗಳ ಹಿಂದೆ ನರೇಶ್ ಗೋಯಲ್ ಮತ್ತವರ ಪತ್ನಿ ಅನಿತಾ ಅವರು ಜೆಟ್ ಏರ್ ​ವೇಸ್ ಸಂಸ್ಥೆಯನ್ನು ಸ್ಥಾಪಿಸಿದ್ದರು. ಇದೀಗ ಗೋಯಲ್ ಅವರ ನಿರ್ಗಮನದ ನಂತರ ಕಂಪನಿಯ ಆಡಳಿತ ಮಂಡಳಿಯಲ್ಲಿ ಸಿಇಓ ವಿನಯ್ ದುಬೇ ಇರಲಿದ್ದಾರೆ.
ನರೇಶ್ ಗೋಯಲ್ ಅವರು ಆರ್ಥಿಕ ಸಂಕಷ್ಟದಲ್ಲಿರುವ ಜೆಟ್‌ ಎರ್ ವೇಸ್ ವಿಮಾನಯಾನ ಸಂಸ್ಥೆಯನ್ನು ಮೇಲಕ್ಕೆತ್ತಲು ಹೆಚ್ಚು ಶ್ರಮಪಟ್ಟಿದ್ದರು. ಆದರೆ ಯಾವುದೂ ಕೈಗೂಡಿರಲಿಲ್ಲ.  ಜೆಟ್ ಏರ್‌ ವೇಸ್ ಸಂಸ್ಥೆಯ ಹೆಚ್ಚಿನ ವಿಮಾನಗಳು ಹಾರಾಟ ನಡೆಸುತ್ತಿಲ್ಲ. 
ಈ ಮಧ್ಯೆ, ನರೇಶ್ ಗೋಯಲ್ ಬೋರ್ಡ್ ಸದಸ್ಯತ್ವದಿಂದ ಕೆಳಗಿಳಿದರೆ ಮಾತ್ರ ಸಾಲ ನೀಡಲು ಸಾಧ್ಯ ಎಂದು ಈಗಾಗಲೇ ಬ್ಯಾಂಕ್ ಕೂಡ ಹೇಳಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ  ನರೇಶ್ ಗೋಯಲ್ ಹಾಗೂ ಪತ್ನಿ ಅನಿತಾ ಗೋಯಲ್ ಸಂಸ್ಥೆಗೆ ರಾಜಿನಾಮೆ ನೀಡಿ ಹೊರ ನಡೆದಿದ್ದಾರೆ.
SCROLL FOR NEXT