ವಾಣಿಜ್ಯ

ಬಿಎಸ್ಎನ್ಎಲ್, ಎಂಟಿಎನ್ಎಲ್ ವಿಲೀನಕ್ಕೆ ಕೇಂದ್ರ ಸಂಪುಟ ಅಸ್ತು, ಟೆಲಿಕಾಂ ಸಂಸ್ಥೆಗಳ ಪುನರುಜ್ಜೀವನಕ್ಕೆ 4 ಹಂತಗಳ ಯೋಜನೆ

Raghavendra Adiga

ನವದೆಹಲಿ: ನಷ್ಟದ ಹಾದಿ ಹಿಡಿರಿರುವ ಟೆಲಿಕಾಂ ಕಂಪೆನಿಗಳಾದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ಮತ್ತು ಮಹಾನಗರ ಟೆಲಿಫೋನ್ ನಿಗಮ್ ಲಿಮಿಟೆಡ್ (ಎಂಟಿಎನ್ಎಲ್) ನ ಪುನರುಜ್ಜೀವನ ಪ್ಯಾಕೇಜ್ ಗೆ ಕೇಂದ್ರ ಸಚಿವ ಸಂಪುಟ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಅಂತೆಯೇ ಈ ಎರಡೂ ಸಂಸ್ಥೆಗಳ ವಿಲೀನ ಪ್ರಸ್ತಾಪಕ್ಕೆ ಸಹ ಸಚಿವ ಸಂಪುಟ ಅನುಮೋದನೆ ನೀಡಿದೆ.

"ಎಂಟಿಎನ್ಎಲ್, ಬಿಎಸ್ಎನ್ಎಲ್ ಅನ್ನು ಮುಚ್ಚಲಾಗುವುದಿಲ್ಲ" ಎಂದು ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆಗಳ ಪುನರುಜ್ಜೀವನಕ್ಕಾಗಿ ಎಂಟಿಎನ್ಎಲ್ ಅನ್ನು ಬಿಎಸ್ಎನ್ಎಲ್ನೊಂದಿಗೆ ವಿಲೀನಗೊಳಿಸಲಾಗುವುದು ಎಂದು ಸಚಿವರು ಹೇಳಿದರು. ಪೂರ್ಣ ವಿಲೀನದವರೆವಿಗೆ ಎಂಟಿಎನ್ಎಲ್ ಬಿಎಸ್ಎನ್ಎಲ್ ನ ಒಂದು ಘಟಕವಾಗಿ ಕಾರ್ಯನಿರ್ವಹಿಸಲಿದೆ.

ಟೆಲಿಕಾಂ ಸಂಸ್ಥೆಗಳನ್ನು ಪುನರುಜ್ಜೀವನಗೊಳಿಸುವ  ನಾಲ್ಕು ಹಂತದ ಯೋಜನೆಯನ್ನು ಸರ್ಕಾರ ಮಂಗಳವಾರ ಪ್ರಕಟಿಸಿದೆ. ಈ ಎರಡು ಕಂಪನಿಗಳನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಇದಕ್ಕಾಗಿ ಸಾವರಿನ್ ಬಾಂಡ್‌ಗಳ ಮೂಲಕ 15,000 ಕೋಟಿ ರೂ ಸಂಗ್ರಹಿಸುವ ಗುರಿ ಇದೆ.

"38,000 ಕೋಟಿ ರೂ. ಮೌಲ್ಯದ ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಆಸ್ತಿಗಳನ್ನು ನಾಲ್ಕು ವರ್ಷಗಳಲ್ಲಿ ಹಣವಾಗಿ ಮಾರ್ಪಡಿಸಲಾಗುವುದು. ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಎರಡಕ್ಕೂ 4 ಜಿ ಸ್ಪೆಕ್ಟ್ರಮ್ ನೀಡಲಾಗುವುದು" ಸಚಿವರು ಘೋಷಿಸಿದರು. ಅಲ್ಲದೆ ಎರಡೂ ಕಂಪನಿಗಳ ಉದ್ಯೋಗಿಗಳಿಗೆ "ಆಕರ್ಷಕ" ವಿಆರ್ ಎಸ್ ಪ್ಯಾಕೇಜ್ ನೀಡಲು ಸರ್ಕಾರ ಯೋಜಿಸಿದೆ.

"ಉದಾಹರಣೆಗೆ, ವಿಆರ್​ಎಸ್ ತೆಗೆದುಕೊಳ್ಳುವವರಿಗೆ 60 ವರ್ಷ ವಯಸ್ಸಿನ ತನಕದ ವೇತನದ ಶೇಕಡ 125 ಪರಿಹಾರ ಮತ್ತು ಪಿಂಚಣಿ, ಗ್ರಾಜುಟಿಯನ್ನು ಕೊಡಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.

SCROLL FOR NEXT