ವಾಣಿಜ್ಯ

ಎಸ್ ಬಿಐ ಗ್ರಾಹಕರ ಗಮನಕ್ಕೆ! ನವೆಂಬರ್ 1ರಿಂದ ನಿಮ್ಮ ಠೇವಣಿ ಮೇಲಿನ ಬಡ್ಡಿ ದರ ಮತ್ತೆ ಕಡಿತ

Lingaraj Badiger

ಮುಂಬೈ: ದೇಶದ ಮುಂಚೂಣಿ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) ನವೆಂಬರ್ 1ರಿಂದ ಉಳಿತಾಯ ಖಾತೆಯ ಠೇವಣಿ ಮತ್ತು ಸ್ಥಿರ ಠೇವಣಿ ಮೇಲಿನ ಬಡ್ಡಿ ದರವನ್ನು ಮತ್ತೆ ಕಡಿತ ಮಾಡಲಿದೆ.

ಕಳೆದ ಆಗಸ್ಟ್ ನಲ್ಲಿ ಚಿಲ್ಲರೆ ದೀರ್ಘಾವಧಿಯ ಠೇವಣಿಗಳು, ಅಲ್ಪಾವಧಿ ಮತ್ತು ಬೃಹತ್ ಠೇವಣಿಗಳ ಮೇಲಿನ ಬಡ್ಡಿ ದರ ಕಡಿತಗೊಳಿಸಿದ್ದ ಎಸ್ ಬಿಐ ಈಗ ಮತ್ತೆ ಬಡ್ಡಿದರ ಇಳಿಕೆ ಮಾಡಿದೆ.

ಬ್ಯಾಂಕಿಗೆ ಬರುವ ಹಣದ ಪ್ರಮಾಣದಲ್ಲಿ ಕಡಿಮೆಯಾಗಿರುವುದರಿಂದ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಇಳಿಕೆ ಮಾಡಲಾಗುವುದು ಎಂದು ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದ್ದು, 1 ಲಕ್ಷ ರೂಪಾಯಿ ವರೆಗಿನ ಉಳಿತಾಯ ಖಾತೆಯ ಹಣದ ಮೇಲಿನ ಬಡ್ಡಿ ದರವನ್ನು ಶೇ.3.50ರಿಂದ ಶೇ.3.25ಕ್ಕೆ ಇಳಿಸಲಾಗಿದೆ. ಉಳಿತಾಯ ಖಾತೆಯ 1 ಲಕ್ಷ ರೂಪಾಯಿ ಮೇಲಿನ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಚಿಲ್ಲರೆ ದೀರ್ಘಾವಧಿ ಠೇವಣಿ ಮೇಲಿನ ಬಡ್ಡಿ ದರ 10 ಬಿಪಿಎಸ್ ಕಡಿಮೆಯಾಗಲಿದೆ. ಬೃಹತ್ ಠೇವಣಿಗಳ ಮೇಲಿನ ಬಡ್ಡಿ ದರವನ್ನು 30 ಬಿಪಿಎಸ್ ನಷ್ಟು ಕಡಿತವಾಗಲಿದ್ದು, ಇದು ನವೆಂಬರ್ 1ರಿಂದ ಜಾರಿಗೆ ಬರಲಿದೆ ಎಂದು ಬ್ಯಾಂಕ್ ತಿಳಿಸಿದೆ.

SCROLL FOR NEXT