ವಾಣಿಜ್ಯ

ಪ್ಯಾನ್-ಆಧಾರ್ ಸಂಖ್ಯೆ ಜೋಡಣೆ ಅವಧಿ ಡಿ.31ಕ್ಕೆ ವಿಸ್ತರಣೆ 

Sumana Upadhyaya

ನವದೆಹಲಿ: ಪ್ಯಾನ್ ಸಂಖ್ಯೆಯನ್ನು ಆಧಾರ್ ಸಂಖ್ಯೆ ಜೊತೆಗೆ ಜೋಡಣೆ ಮಾಡುವ ದಿನಾಂಕವನ್ನು ಕೇಂದ್ರ ಹಣಕಾಸು ಸಚಿವಾಲಯ ಸೆಪ್ಟೆಂಬರ್ 30ರಿಂದ ಡಿಸೆಂಬರ್ 31ರವರೆಗೆ ವಿಸ್ತರಿಸಿದೆ. ಈ ಹಿಂದೆ ಮಾರ್ಚ್ 31ರಂದು 6 ತಿಂಗಳ ಅವಧಿಗೆ ವಿಸ್ತರಿಸಲಾಗಿತ್ತು.


ಈ ದಿನಾಂಕದೊಳಗೆ ಪ್ಯಾನ್ ಸಂಖ್ಯೆಯನ್ನು ಆಧಾರ್ ಸಂಖ್ಯೆಯ ಜೊತೆ ಜೋಡಣೆ ಮಾಡಿಕೊಳ್ಳದಿದ್ದರೆ ಪ್ಯಾನ್ ಕಾರ್ಡು ನಿಷ್ಕ್ರಿಯವಾಗುತ್ತದೆ. ಕೇಂದ್ರ ಸರ್ಕಾರ ಜೋಡಣೆ ಅವಧಿಯನ್ನು ವಿಸ್ತರಿಸುತ್ತಿರುವುದು ಇದು ಏಳನೇ ಸಲ.


ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರದ ಫ್ಲಾಗ್ ಶಿಪ್ ಆಧಾರ್ ಯೋಜನೆ ಸಾಂವಿಧಾನಿಕವಾಗಿ ಮೌಲ್ಯಯುತವಾಗಿದ್ದು ಆದಾಯ ತೆರಿಗೆ ವಿವರ ಸಲ್ಲಿಕೆ ಮತ್ತು ಪ್ಯಾನ್ ಕಾರ್ಡು ಹಂಚಿಕೆಗೆ ಅತ್ಯಗತ್ಯ ಎಂದು ಆದೇಶ ಹೊರಡಿಸಿತ್ತು. 


ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139ಎಎ(2), ಜುಲೈ 1, 2017ಕ್ಕೆ ಪ್ಯಾನ್ ಸಂಖ್ಯೆ ಹೊಂದಿರುವ ಪ್ರತಿಯೊಬ್ಬರೂ ಆಧಾರ್ ಸಂಖ್ಯೆ ಪಡೆಯಲು ಅರ್ಹರಾಗಿರುತ್ತಾರೆ. 


ಆಧಾರ್-ಪ್ಯಾನ್ ಜೋಡಣೆ ಹೇಗೆ: ನಿಮ್ಮ ಮೊಬೈಲ್ ಸಂಖ್ಯೆಯಿಂದ UIDPAN *space* 12 ಅಂಕೆಯ ಆಧಾರ್ ಸಂಖ್ಯೆ *space* 10 ಅಂಕೆಯ ಪ್ಯಾನ್ ಸಂಖ್ಯೆಯನ್ನು ಟೈಪ್ ಮಾಡಿ 567678 ಅಥವಾ 56161ನ್ನು ಸಂದೇಶ ಕಳುಹಿಸಿ.


ಉದಾಹರಣೆಗೆ ಈ ರೀತಿ: UIDPAN 012345678910 ABCDE1964F

SCROLL FOR NEXT