ವಾಣಿಜ್ಯ

ಕೊರೋನಾ ಲಾಕ್‌ಡೌನ್: ಇಂದಿನಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ಪುನಾರಂಭ

Raghavendra Adiga

ಮುಂಬೈ: ದೇಶಾದ್ಯಂತ ಜಾರಿಯಲ್ಲಿರುವ ಕೋವಿಡ್ 19 ಲಾಕ್‌ಡೌನ್ ಮಧ್ಯೆ ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹವು ಸೋಮವಾರದಿಂದ ಪುನರಾರಂಭಗೊಂಡಿದೆ.

ಸ್ಥಗಿತಗೊಂಡ ಆರ್ಥಿಕ ಚಟುವಟಿಕೆಗಳನ್ನು ಪುನರುಜ್ಜೀವನಗೊಳಿಸುವ ಸಲುವಾಗಿ ಭಾರತವು ಇಂದಿನಿಂದ ಕೊರೋನಾವೈರಸ್ ನಿರ್ಬಂಧಗಳನ್ನು ನಿಧಾನವಾಗಿ ಸಡಿಲಿಸುತ್ತಿರುವ ಭಾಗವಾಗಿ ಈ ಉಪಕ್ರಮ ಜಾರಿಯಾಗಿದೆ.

ಮಾರ್ಚ್ 24 ರಂದು 21 ದಿನಗಳ ರಾಷ್ಟ್ರವ್ಯಾಪಿ ಲಾಕ್ ಡೌನ್ ಘೋಷಣೆಯಾದ ನಂತರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹವನ್ನು ಸ್ಥಗಿತಗೊಳಿಸಿತ್ತು.

ಮುಂಬೈನ ವಾಶಿ, ನಾಗ್ಪುರದ ಬೋರ್ಖೆಡಿ, ಗುರುಗ್ರಾಮ್, ಚೆನ್ನೈನ ಪುರೂರ್ ವಾರಣಾಸಿಯ ದಾಫಿಯಲ್ಲಿ ಟೋಲ್ ಪ್ಲಾಜಾಗಳು ಚಾಲನೆಗೊಂಡಿದ್ದು ಅಲ್ಲಿನ ನೌಕರರು ಕೈಗವಸು ಮತ್ತು ಮಾಸ್ಕ್ ಧರಿಸಿರುವುದು ಕಂಡುಬಂದಿದೆ.

"ನಾವು ಕೇವಲ 2 ಮಾರ್ಗಗಳನ್ನು (ನಗದು ಮತ್ತು ಟ್ಯಾಗ್ ಲೇನ್) ಮಾತ್ರ ನಿರ್ವಹಿಸುತ್ತಿದ್ದೇವೆ. ಟೋಲ್ ಬೂತ್ ನಿರ್ವಾಹಕರು ಮಾಸ್ಕ್ ಗಳು ಮತ್ತು ಸ್ಯಾನಿಟೈಸರ್ಗಳನ್ನು ಬಳಸುತ್ತಿದ್ದಾರೆ" ಎಂದು ವಾರಣಾಸಿಯ ರಾಷ್ಟ್ರೀಯ ಹೆದ್ದಾರಿ 2 ರಲ್ಲಿರುವ ದಾಫಿ ಟೋಲ್ ಪ್ಲಾಜಾದಲ್ಲಿ ಉಪ ಟೋಲ್ ಪ್ಲಾಜಾ ವ್ಯವಸ್ಥಾಪಕ ಹೇಳಿದ್ದಾರೆ.

ಭಾರತವು ರಾಷ್ಟ್ರವ್ಯಾಪಿ ಲಾಕ್ ಡೌನ್ ಆಗಿದ್ದು  ಏಪ್ರಿಲ್ 14 ರಂದು ಮತ್ತೊಮ್ಮೆ ಲಾಕ್ ಡೌನ್ ವಿಸ್ತರಣೆಯಾಗಿದೆ. ದೇಶದಲ್ಲಿ 500 ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದ ಕೊರೋನಾವೈರಸ್ ಹರಡುವಿಕೆ ತಡೆಗಾಗಿ ಕೇಂದ್ರ ಸರ್ಕಾರ ಈ ಮಹತ್ವದ ಕ್ರಮ ತೆಗೆದುಕೊಂಡಿದೆ. ಏಪ್ರಿಲ್ 14 ರಂದು ತಮ್ಮ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೇ 3 ರವರೆಗೆ ಲಾಕ್‌ಡೌನ್ ವಿಸ್ತರಿಸುವುದಾಗಿ ಘೋಷಿಸಿದರು ಮತ್ತು ಏಪ್ರಿಲ್ 20 ರ ನಂತರ ಹಾಟ್‌ಸ್ಪಾಟ್ ಇಲ್ಲದ ಸ್ಥಳಗಳಲ್ಲಿ ನಿರ್ಬಂಧವನ್ನು ಸಡಿಲಿಕೆ ಮಾಡುವುದಾಗಿ ಅವರು ಹೇಳೀದ್ದರು.

ಆಯ್ದ ಆರ್ಥಿಕ ಚಟುವಟಿಕೆಗಳ ಪಟ್ಟಿಗಾಗಿ ದೇಶಕ್ಕೆ ಹೊಸ ಲಾಕ್‌ಡೌನ್-ಮಾರ್ಗಸೂಚಿಗಳನ್ನು ಏಪ್ರಿಲ್ 15 ರಂದು ಗೃಹ ಸಚಿವಾಲಯ ಬಿಡುಗಡೆ ಮಾಡಿದೆ. ಇದು ಭಾರತದ ಕೊರೋನಾ ಪರಿಸ್ಥಿತಿಯ ಪರಿಶೀಲನೆಯ ನಂತರ ಏಪ್ರಿಲ್ 20 ರ ನಂತರ ಜಾರಿಗೆ ಬರಲಿದೆ.
 

SCROLL FOR NEXT