ವಾಣಿಜ್ಯ

ವಾಹನ ಸವಾರರ ಜೇಬಿಗೆ ಕತ್ತರಿ: ಸತತ 6ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ!

Vishwanath S

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸತತ ಆರನೇ ದಿನ ಏರಿಕೆಯಾಗಿದ್ದು ಸವಾರರಿಗೆ ಹೊರೆಯಾಗುತ್ತಿದೆ.  

ತೈಲ ಮಾರುಕಟ್ಟೆ ಕಂಪನಿಗಳ ಬೆಲೆ ಅಧಿಸೂಚನೆಯ ಪ್ರಕಾರ, ಪೆಟ್ರೋಲ್ ಬೆಲೆ ಲೀಟರ್‌ಗೆ 30 ಪೈಸೆ ಮತ್ತು ಡೀಸೆಲ್ ಬೆಲೆ ಲೀಟರ್ ಗೆ 26 ಪೈಸೆ ಹೆಚ್ಚಳವಾಗಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ  ಗಣನೀಯವಾಗಿ ಕಡಿಮೆ ಆಗುತ್ತಿದ್ದರೂ, ಕೊರೊನಾ ಮತ್ತು ಲಾಕ್ಡೌನ್ ಕಾರಣಗಳಿಂದ ಜನ ಸಾಮಾನ್ಯರು ಕಷ್ಟದಲ್ಲಿದ್ದರೂ, ಸಾರ್ವಜನಿಕರು ವ್ಯಾಪಕವಾದ ವಿರೋಧ ವ್ಯಕ್ತಪಡಿಸುತ್ತಿದ್ದರೂ ಇದಾವುದನ್ನು ಲೆಕ್ಕಿಸದ ಸರ್ಕಾರಿ ಒಡೆತನದ ತೈಲ ಕಂಪನಿಗಳು ಸತತವಾಗಿ ಬೆಲೆ ಏರಿಕೆಯಲ್ಲಿ ನಿರತವಾಗಿವೆ.

ದೆಹಲಿಯಲ್ಲಿ ಪೆಟ್ರೋಲ್ ದರ 83.41 ರೂ.ಗಳಿಂದ 83.71 ರೂ.ಗೆ ಏರಿದರೆ. ಡೀಸೆಲ್ ಬೆಲೆ 73.61 ರೂ.ನಿಂದ 73.87 ರೂ.ಗೆ ಏರಿದೆ. ಸುಮಾರು ಎರಡು ತಿಂಗಳ ವಿರಾಮದ ನಂತರ ತೈಲ ಕಂಪನಿಗಳು ದೈನಂದಿನ ಬೆಲೆ ಪರಿಷ್ಕರಣೆಯನ್ನು ಪುನರಾರಂಭಿಸಿವೆ. ಇನ್ನು ನವೆಂಬರ್ 20ರಿಂದ 15 ಬಾರಿ ಬೆಲೆ ಏರಿಕೆಯಾಗಿದ್ದರೆ ಸತತ ಆರನೇ ದಿನ ದರ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್ ಲೀಟರ್ ಗೆ 31 ಪೈಸೆ ಏರಿಕೆಯಾಗಿದ್ದು ಈ ಮೂಲಕ ಪೆಟ್ರೋಲ್ ಬೆಲೆ 86.51 ರೂಪಾಯಿಗೆ ತಲುಪಿದೆ. ಇನ್ನು ಡೀಸೆಲ್ ಬೆಲೆಯಲ್ಲಿ 28 ಪೈಸೆ ಏರಿಕೆಯಾಗಿದ್ದು ಇಂದಿನ ದರ 78.31 ರೂಪಾಯಿಗೆ ತಲುಪಿದೆ.

SCROLL FOR NEXT