ವಾಣಿಜ್ಯ

ಮೂರನೇ ತ್ರೈಮಾಸಿಕದಲ್ಲಿ ಇನ್ಫೋಸಿಸ್ ಆದಾಯ 4,466 ಕೋಟಿ ರೂ. ಹೆಚ್ಚಳ

Lingaraj Badiger

ಬೆಂಗಳೂರು: ಡಿಸೆಂಬರ್​ಗೆ ಕೊನೆಗೊಂಡ ಮೂರನೇ ತ್ರೈಮಾಸಿಕದಲ್ಲಿ ದೇಶದ ಎರಡನೇ ಅತಿದೊಡ್ಡ ಐಟಿ ಸೇವಾ ಸಂಸ್ಥೆ ಇನ್ಫೋಸಿಸ್ ಶೇ.23.7ರಷ್ಟು ಹೆಚ್ಚುವರಿ ಆದಾಯ ಗಳಿಸಿದೆ. ಈ ಮೂಲಕ ಕಂಪನಿಯ ಸಮಗ್ರ ನಿವ್ವಳ ಲಾಭ 4,466 ಕೋಟಿ ರೂ. ತಲುಪಿದೆ.

ಇನ್ಫೋಸಿಸ್ ಶುಕ್ರವಾರ ಬಿಡುಗಡೆ ಮಾಡಿರುವ ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕ ವರದಿಯಲ್ಲಿ ಈ ಮಾಹಿತಿ ಬಹಿರಂಗಗೊಂಡಿದೆ.

ಕಳೆದ ವರ್ಷದ ಇದೇ ಅವಧಿಯ ನಿವ್ವಳ ಲಾಭ​ 3,610 ಕೋಟಿ ರೂಪಾಯಿಯಷ್ಟಿತ್ತು. ಕಳೆದ ಹಣಕಾಸು ವರ್ಷದ ಇದೇ ಅವಧಿಯ ಆದಾಯ 21,400 ಕೋಟಿ ರೂ. ಇದ್ದದ್ದು ಈ ವರ್ಷ ಶೇಕಡ 7.9 ಹೆಚ್ಚಳವಾಗಿದ್ದು 23,092 ಕೋಟಿ ರೂ.ಗಳಿಗೆ ತಲುಪಿದೆ.
2019–20ನೇ ಹಣಕಾಸು ವರ್ಷದ ವರಮಾನ ಮುನ್ನೋಟವನ್ನು ಕಂಪನಿಯು ಅಕ್ಟೋಬರ್‌ನಲ್ಲಿನ ಅಂದಾಜಿಸಿದ್ದ ಶೇ. 9ರಿಂದ ಶೇ. 10ರಿಂದ, ಶೇ. 10 ರಿಂದ ಶೇ. 10.5ಕ್ಕೆ ಹೆಚ್ಚಿಸಿದೆ.

‘ಗ್ರಾಹಕರ ಜತೆಗಿನ ನಮ್ಮ ಬಾಂಧವ್ಯ ಸುಸ್ಥಿರ ರೀತಿಯಲ್ಲಿ ವೃದ್ಧಿಯಾಗುತ್ತಿದೆ. ಕಂಪನಿಯ ವಹಿವಾಟು ಎರಡಂಕಿ ಪ್ರಗತಿ ದಾಖಲಿಸಿರುವುದರಲ್ಲಿ ಇದು ಪ್ರತಿಫಲನಗೊಂಡಿದೆ. ಡಿಜಿಟಲ್‌ ಬದಲಾವಣೆ ಕಾಲಘಟ್ಟದಲ್ಲಿ ಗ್ರಾಹಕರು ಕಂಪನಿ ಜತೆಗೆ ನಿರಂತರವಾಗಿ ಇರಲಿದ್ದಾರೆ’ ಎಂದು ಸಿಇಒ ಸಲೀಲ್‌ ಪಾರೇಖ್‌ ಹೇಳಿದ್ದಾರೆ.

‘ಈ ವರ್ಷ ದೊಡ್ಡ ಮೊತ್ತದ ಒಪ್ಪಂದಗಳು ಶೇ. 56ರಷ್ಟು ಪ್ರಗತಿ ಸಾಧಿಸಿವೆ. ಕಂಪನಿ ತೊರೆಯುವ ಸಿಬ್ಬಂದಿ ಸಂಖ್ಯೆಯಲ್ಲಿ ಇಳಿಕೆಯಾಗಿದೆ’ ಎಂದು ಸಿಒಒ ಪ್ರವೀಣ್‌ ರಾವ್‌ ಹೇಳಿದ್ದಾರೆ.

23.7 %- ನಿವ್ವಳ ಲಾಭದಲ್ಲಿನ ಹೆಚ್ಚಳ
7.9 %- ವರಮಾನದಲ್ಲಿನ ಏರಿಕೆ
10–10.5 %- ಹಣಕಾಸು ವರ್ಷಕ್ಕೆ ವರಮಾನ ಹೆಚ್ಚಳದ ನಿರೀಕ್ಷೆ
2,43,454-ಕಂಪನಿ ಉದ್ಯೋಗಿಗಳ ಸಂಖ್ಯೆ

SCROLL FOR NEXT