ವಾಣಿಜ್ಯ

ಸಹರಾ ಗ್ರೂಪ್ ನಿಂದ ಹೂಡಿಕೆದಾರರಿಗೆ 62,600 ಕೋಟಿ ರೂ. ಹಣ ಬಾಕಿ: ಸುಪ್ರೀಂ ಕೋರ್ಟ್ ಮೊರೆ ಹೋದ ಸೆಬಿ 

Sumana Upadhyaya

ನವದೆಹಲಿ:ಸಹರಾ ಗ್ರೂಪ್ ಗೆ ಮತ್ತೊಂದು ಬಾರಿ ಹಿನ್ನೆಡೆಯಾಗಿದೆ. ಭಾರತದ ಷೇರು ಮಾರುಕಟ್ಟೆ ನಿಯಂತ್ರಕ ಪ್ರಾಧಿಕಾರ ಸೆಬಿ, ಹೂಡಿಕೆದಾರರಿಗೆ ನೀಡಲಿರುವ ಬಾಕಿ ಉಳಿಕೆ ಮೊತ್ತ 62 ಸಾವಿರದ 602 ಕೋಟಿ ರೂಪಾಯಿಗಳನ್ನು ಠೇವಣಿಯಿರಿಸಲು ಸಹಾರಾ ಗ್ರೂಪ್ ಮುಖ್ಯಸ್ಥ ಸುಬ್ರತಾ ರಾಯ್ ಮತ್ತು ಅವರ ಎರಡು ಕಂಪೆನಿಗಳಿಗೆ ಆದೇಶ ನೀಡಬೇಕೆಂದು ಸೆಬಿ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.

ಸೆಬಿ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯಲ್ಲಿ, ಇಷ್ಟು ಮೊತ್ತವನ್ನು ಭರಿಸಲು ಸುಬ್ರತಾ ರಾಯ್ ಕಂಪೆನಿಗೆ ಸಾಧ್ಯವಾಗದಿದ್ದರೆ ಅವರನ್ನು ಕಸ್ಟಡಿಗೊಪ್ಪಿಸಬೇಕೆಂದು ಸಹ ಒತ್ತಾಯಿಸಿದೆ. 2014ರ ಮಾರ್ಚ್ ನಲ್ಲಿ ನ್ಯಾಯಾಂಗ ನಿಂದನೆ ವಿಚಾರಣೆಯನ್ನು ಎದುರಿಸಲು ವಿಫಲವಾದ ಹಿನ್ನೆಲೆಯಲ್ಲಿ ಬಂಧನಕ್ಕೀಡಾಗಿದ್ದ ಸುಬ್ರತಾ ರಾಯ್ 2016ರಿಂದ ಜಾಮೀನಿನ ಮೇಲೆ ಹೊರಗಿದ್ದಾರೆ.

ಸಹರಾ ಗ್ರೂಪ್ 2012 ಮತ್ತು 2015ರ ಕೋರ್ಟ್ ಆದೇಶವನ್ನು ಪಾಲಿಸಲು ವಿಫಲವಾಗಿದೆ. ಶೇಕಡಾ 15ರಷ್ಟು ವಾರ್ಷಿಕ ಬಡ್ಡಿ ಮೊತ್ತ ಸೇರಿದಂತೆ ಹೂಡಿಕೆದಾರರಿಂದ ಸಂಗ್ರಹಿಸಿದ ಎಲ್ಲಾ ಮೊತ್ತವನ್ನು ಸೆಬಿಯನ್ನಿ ಠೇವಣಿಯಿರಿಸಲು ಕಂಪೆನಿ ವಿಫಲವಾಗಿದೆ ಎಂದು ಸೆಬಿ ಆರೋಪಿಸಿದೆ. ಆದರೆ ಸಹರಾ ಗ್ರೂಪ್ ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದೆ. 

ಹೂಡಿಕೆದಾರರಿಂದ ಸಂಗ್ರಹಿಸಿರುವ ಬಹುತೇಕ ಠೇವಣಿಗಳನ್ನು ಹಿಂತಿರುಗಿಸಿದ್ದು, ಸಂಬಂಧಪಟ್ಟ ದಾಖಲೆಗಳನ್ನು ಸೆಬಿಗೆ ನೀಡಲಾಗಿದೆ. ಹೂಡಿಕೆ ಮಾಡಿ ಹಣ ಪಡೆಯಲು ಬಾಕಿ ಇರುವವರು ಹಣ ಪಡೆಯುವಂತೆ ಪತ್ರಿಕೆಗಳಲ್ಲಿ ಜಾಹೀರಾತು ಕೂಡ ನೀಡಿದ್ದೆವು ಎಂದು ಸಹರಾ ಗ್ರೂಪ್ ಈ ಹಿಂದೆ ಕೋರ್ಟ್ ಗೆ ಹೇಳಿತ್ತು.

SCROLL FOR NEXT