ವಾಣಿಜ್ಯ

ಸಚಿವಾಲಯ, ಸರ್ಕಾರಿ ಕಚೇರಿಗಳಲ್ಲಿ ಬಿಎಸ್ ಎನ್ ಎಲ್, ಎಂಟಿಎನ್ಎಲ್ ಕಡ್ಡಾಯ ಬಳಕೆಗೆ ಕೇಂದ್ರ ಆದೇಶ!

Sumana Upadhyaya

ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ ನಿಯಮಿತ(ಬಿಎಸ್ಎನ್ಎಲ್) ಮತ್ತು ಮಹಾನಗರ ಟೆಲಿಫೋನ್ ನಿಗಮ ಲಿಮಿಟೆಡ್(ಎಂಟಿಎನ್ ಎಲ್) ಸೇವೆಗಳನ್ನು ಎಲ್ಲಾ ಸಚಿವಾಲಯಗಳು, ಸಾರ್ವಜನಿಕ ಇಲಾಖೆ ಮತ್ತು ಸಾರ್ವಜನಿಕ ಸೇವೆಗಳ ಘಟಕಗಳಲ್ಲಿ ಕಡ್ಡಾಯವಾಗಿ ಬಳಸಬೇಕೆಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಎಲ್ಲಾ ಸಚಿವಾಲಯಗಳು, ಕೇಂದ್ರ ಸರ್ಕಾರಿ ಇಲಾಖೆಗಳು, ಕೇಂದ್ರ ಸ್ವಾಯತ್ತ ಸಂಸ್ಥೆಗಳು, ಕೇಂದ್ರ ಸರ್ಕಾರ ಸ್ವಾಮ್ಯದ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಬಿಎಸ್ ಎನ್ ಎಲ್ ಮತ್ತು ಎಂಟಿಎನ್ಎಲ್ ಸೇವೆಗಳನ್ನು ಬಳಸಬೇಕೆಂದು ದೂರಸಂಪರ್ಕ ಇಲಾಖೆ ಲಿಖಿತ ಆದೇಶ ಹೊರಡಿಸಿದೆ.

ಮೊನ್ನೆ ಅಕ್ಟೋಬರ್ 12ರಂದು ಕೇಂದ್ರ ದೂರಸಂಪರ್ಕ ಸಚಿವಾಲಯ ಈ ಆದೇಶ ಹೊರಡಿಸಿದ್ದು ಎಲ್ಲಾ ಸಚಿವಾಲಯಗಳು ಮತ್ತು ಕೇಂದ್ರ ಸರ್ಕಾರದ ಇಲಾಖೆಗಳಿಗೆ ಹಣಕಾಸು ಸಚಿವಾಲಯದೊಂದಿಗೆ ಸಮಾಲೋಚನೆ ನಡೆಸಿ ಹೊರಡಿಸಿದೆ.

ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ವೆಚ್ಚಗಳ ಸಚಿವಾಲಯ ತಿಳಿಸಿದೆ.

ಬಿಎಸ್ಎನ್ ಎಲ್/ಎಂಟಿಎನ್ ಎಲ್ ನೆಟ್ ವರ್ಕ್ ಗಳನ್ನೇ ಇಂಟರ್ನೆಟ್, ಬ್ರಾಡ್ ಬ್ಯಾಂಡ್, ಲ್ಯಾಂಡ್ ಲೈನ್ ಮತ್ತು ಲೀಸ್ ಲೈನ್ ಅಗತ್ಯಗಳಿಗೆ ಕಡ್ಡಾಯವಾಗಿ ಬಳಸುವಂತೆ ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳು, ಸ್ವಾಯತ್ತ ಸಂಸ್ಥೆಗಳಿಗೆ ಸೂಚನೆ ನೀಡಲು ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಸೂಚಿಸಲಾಗಿದೆ.

ಕಳೆದ ಹಣಕಾಸು ವರ್ಷದಲ್ಲಿ ಬಿಎಸ್ಎನ್ ಎಲ್ 15 ಸಾವಿರದ 500 ಕೋಟಿ ರೂಪಾಯಿ, ಎಂಟಿಎನ್ ಎಲ್ 3 ಸಾವಿರದ 694 ಕೋಟಿ ರೂಪಾಯಿಗಳು ನಷ್ಟವಾಗಿದ್ದು, ನಷ್ಟದಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆಗಳಿಗೆ ಉತ್ತೇಜನ ನೀಡಲು ಸರ್ಕಾರ ಈ ಕ್ರಮ ಕೈಗೊಂಡಿದೆ.

ನವೆಂಬರ್ 2008ರಲ್ಲಿ 2.9 ಕೋಟಿ ಇದ್ದ ಬಿಎಸ್ಎನ್ ಎಲ್ ವೈರ್ ಲೈನ್ ಗ್ರಾಹಕರ ಸಂಖ್ಯೆ ಪ್ರಸಕ್ತ ವರ್ಷದ ಜುಲೈಗೆ 80 ಲಕ್ಷಕ್ಕೆ ಇಳಿದಿದೆ. ಎಂಟಿಎನ್ ಎಲ್ ನಲ್ಲಿ 2008ರ ನವೆಂಬರ್ ನಲ್ಲಿ 35.4 ಲಕ್ಷ ಇದ್ದ ಗ್ರಾಹಕರ ಸಂಖ್ಯೆ ಈ ವರ್ಷ ಜುಲೈಗೆ 30.7 ಲಕ್ಷಕ್ಕೆ ಇಳಿದಿದೆ.

SCROLL FOR NEXT