ವಾಣಿಜ್ಯ

ಮನೆಯಿಂದ ಕೆಲಸ ಮಾಡುವ ಉದ್ಯೋಗಿಗಳ ವೇತನ ಕಡಿತಕ್ಕೆ ಗೂಗಲ್ ಚಿಂತನೆ 

Srinivas Rao BV

ನ್ಯೂಯಾರ್ಕ್: ಕೊರೋನಾ ಸಾಂಕ್ರಾಮಿಕ ಹಲವು ಕ್ಷೇತ್ರಗಳಲ್ಲಿನ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಮಾಡಿದೆ. 

ಗೂಗಲ್, ಫೇಸ್ ಬುಕ್, ಟ್ವಿಟರ್ ನಂತಹ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಕಳೆದ 1 ವರ್ಷದಿಂದ ಮನೆಯಿಂದಲೇ ಕೆಲಸ ಮಾಡುವ ಸೌಲಭ್ಯ ಒದಗಿಸಿವೆ. ಇನ್ನಿತರ ಟೆಕ್ ಸಂಬಂಧಿತ ಕಂಪನಿಗಳು ತಮ್ಮ ನೌಕರರರಿಗೆ ಶಾಶ್ವತವಾಗಿ ಮನೆಯಿಂದಲೇ ಕೆಲಸ ಮಾಡುವ ಆಯ್ಕೆಯನ್ನು ಪರಿಗಣಿಸುವುದಕ್ಕೂ ಅವಕಾಶ ನೀಡಿವೆ. ಈ ಬೆನ್ನಲ್ಲೇ ಸರ್ಚ್ ಇಂಜಿನ್ ದೈತ್ಯ ಸಂಸ್ಥೆ ಗೂಗಲ್ ಶಾಶ್ವತವಾಗಿ ಮನೆಯಿಂದಲೇ ಕೆಲಸ ಮಾಡಲು ಬಯಸುವ ತನ್ನ ಉದ್ಯೋಗಿಗಳಿಗೆ ಮಾಸಿಕ ವೇತನ ಕಡಿತಗೊಳಿಸುವ ಬಗ್ಗೆ ಚಿಂತನೆ ನಡೆಸಿದೆ. 

ರಾಯ್ಟರ್ಸ್ ವರದಿಯ ಪ್ರಕಾರ ದೂರದ ಪ್ರದೇಶಗಳಲ್ಲಿದ್ದುಕೊಂಡು ಮನೆಯಿಂದ ಕೆಲಸ ಮಾಡುತ್ತಿರುವವರಿಗೆ ವೇತನ ಕತ್ತರಿ ಬಿಸಿ ತಟ್ಟಲಿದೆ. 

ಫೇಸ್ ಬುಕ್, ಟ್ವಿಟರ್ ಈಗಾಗಲೇ ಇಂತಹ ನಿಯಮವನ್ನು ಜಾರಿಗೊಳಿಸಿದ್ದು ಕಡಿಮೆ ವೆಚ್ಚವಿರುವ ಪ್ರದೇಶಗಳಿಂದ ಕಾರ್ಯನಿರ್ವಹಿಸುತ್ತಿರುವವರಿಗೆ ವೇತನ ಕಡಿತಗೊಳಿಸುತ್ತಿದೆ. 

ಒಂದು ವೇಳೆ ಗೂಗಲ್ ಈ ನಿಯಮ ಜಾರಿಗೊಳಿಸಿದ್ದೇ ಆದಲ್ಲಿ ಶೇ.25 ರಷ್ಟು ವೇತನ ಕಡಿತಗೊಳ್ಳುವ ಸಾಧ್ಯತೆ ಇದೆ. ಜೂನ್ ತಿಂಗಳಲ್ಲಿಯೇ ಈ ಬಗ್ಗೆ ಆಂತರಿಕವಾಗಿ ಚರ್ಚಿಸಿದ್ದ ಗೂಗಲ್, ತನ್ನ ನೌಕರರು ಮನೆಯಿಂದಲೇ ಶಾಶ್ವತವಾಗಿ ಕೆಲಸ ಮಾಡುವ ಆಯ್ಕೆಯನ್ನು ಒಪ್ಪಿಕೊಂಡಲ್ಲಿ ಕಡಿತಗೊಳ್ಳುವ ವೇತನದ ಬಗ್ಗೆ ಇದ್ದ ಲೆಕ್ಕಾಚಾರಗಳನ್ನೂ ಹಂಚಿಕೊಂಡಿತ್ತು. 

ನಮ್ಮ ಪ್ಯಾಕೇಜ್ ಗಳು ಪ್ರದೇಶಗಳ ಆಧಾರದಲ್ಲಿರುತ್ತವೆ. ಉದ್ಯೋಗಿ ಎಲ್ಲಿ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನು ಆಧರಿಸಿ ಸ್ಥಳೀಯ ಮಾರುಕಟ್ಟೆ ಆಧಾರದಲ್ಲಿ ಹೆಚ್ಚಿನ ವೇತನ ನೀಡಲಾಗುತ್ತದೆ ಎಂದು ಗೂಗಲ್ ವಕ್ತಾರರು ಹೇಳಿದ್ದಾರೆ. 

ಗೂಗಲ್ ಕಚೇರಿಗಳು ಇರುವ ಪ್ರದೇಶಗಳಲ್ಲಿಯೇ ಶಾಶ್ವತವಾಗಿ ಮನೆಯಿಂದ ಕೆಲಸ ಮಾಡಲು ಬಯಸುವ ನೌಕರರಿಗೆ ಈ ವೇತನ ಕಡಿತ ಯೋಜನೆ ಅನ್ವಯವಾಗುವುದಿಲ್ಲ. 

ನ್ಯೂಯಾರ್ಕ್ ನಗರದಿಂದ ರೈಲಿನಲ್ಲಿ ಪ್ರಯಾಣಿಸಲು ಒಂದು ಗಂಟೆ ಸಮಯ ತೆಗೆದುಕೊಳ್ಳುವ ನಗರಗಳಾದ ಸ್ಟಾಮ್‌ಫೋರ್ಡ್, ಕನೆಕ್ಟಿಕಟ್ ಗಳಿಂದ ಶಾಶ್ವತವಾಗಿ ಮನೆಯಿಂದ ಕೆಲಸ ಮಾಡುವ ಆಯ್ಕೆ ಬಯಸುವ ಉದ್ಯೋಗಿಗೆ ಶೇ.15 ರಷ್ಟು ಕಡಿಮೆ ವೇತನ ದೊರೆತರೆ, ನ್ಯೂಯಾರ್ಕ್ ನಲ್ಲೇ ಇದ್ದುಕೊಂಡು ಶಾಶ್ವತವಾಗಿ ಮನೆಯಿಂದ ಕೆಲಸ ಮಾಡುವ ಆಯ್ಕೆ ಬಯಸುವ ಆತನ ಸಹೋದ್ಯೋಗಿಗೆ ಯಾವುದೇ ವೇತನ ಕಡಿತ ಇರುವುದಿಲ್ಲ. 
 

SCROLL FOR NEXT