ವಾಣಿಜ್ಯ

ವರದಿ ಬರುವವರೆಗೆ ತಾಳ್ಮೆಯಿಂದಿರಿ: ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ಠೇವಣಿದಾರರಲ್ಲಿ ನಿರ್ಮಲಾ ಸೀತಾರಾಮನ್ ಮನವಿ

Sumana Upadhyaya

ಬೆಂಗಳೂರು: ಆರ್​ಬಿಐ ನೇಮಿಸಿರುವ ಆಡಳಿತಾಧಿಕಾರಿ ವರದಿ ಸಲ್ಲಿಸುವವರೆಗೆ ತಾಳ್ಮೆಯಿಂದ ಇರಿ ಎಂದು ಬೆಂಗಳೂರಿನ ಬಸವನಗುಡಿಯಲ್ಲಿರುವ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ಠೇವಣಿದಾರರಿಗೆ ಕೇಂದ್ರ ವಿತ್ತ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಮನವಿ ಮಾಡಿಕೊಂಡಿದ್ದಾರೆ.

ಅವರು ನಿನ್ನೆ ಬ್ಯಾಂಕಿನ ಠೇವಣಿದಾರರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ನಂತರ ಮಾತನಾಡಿದ ಅವರು, ಕೆಲವು ಕಾರ್ಯವಿಧಾನಗಳನ್ನು ಅನುಸರಿಸಬೇಕಾದ ಅಗತ್ಯವಿದ್ದು, ಆಡಳಿತಾಧಿಕಾರಿ ಆರ್ ಬಿಐಗೆ ವರದಿ ಸಲ್ಲಿಸಿದ ಕೂಡಲೇ ಸಮಸ್ಯೆಯನ್ನು ಬಗೆಹರಿಸಲು ತಮ್ಮಿಂದಾದ ಪ್ರಯತ್ನವನ್ನು ಖಂಡಿತಾ ಮಾಡುತ್ತೇನೆ ಎಂದು ಹೂಡಿಕೆದಾರರಿಗೆ ಭರವಸೆ ನೀಡಿದರು.

ಬ್ಯಾಂಕ್ ಠೇವಣಿದಾರ ನಿಯೋಗ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿಗೆ ಆಗಮಿಸಿತ್ತು, ಈ ವೇಳೆ ಮಾತನಾಡಿದ ವಿತ್ತ ಸಚಿವೆ, ನಾನು ಕರ್ನಾಟಕ ರಾಜ್ಯವನ್ನು ರಾಜ್ಯಸಭೆಯಲ್ಲಿ ಪ್ರತಿನಿಧಿಸುತ್ತಿದ್ದು, ಬ್ಯಾಂಕಿನಲ್ಲಿ ಹಣ ಠೇವಣಿಯಿಟ್ಟವರಿಗೆ ಸಮಸ್ಯೆಯಾಗಿದೆ ಎಂದು ನನಗೆ ಅರಿವಿದೆ. ಬ್ಯಾಂಕಿನ ಸಮಸ್ಯೆಯಿಂದಾಗಿ ಹಲವು ನಿರ್ಧಾರಗಳಿಗೆ ಸಮಸ್ಯೆಯಾಗುತ್ತಿದೆ. ವಾಸ್ತವಕ್ಕೆ ಸರಿಯಾಗಿ ನಾನು ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದರು.

ಪ್ರತಿಬಾರಿಯೂ ಪ್ರಧಾನಿ ಮೋದಿ ಠೇವಣಿದಾರರ ಹಣವನ್ನು ಮರುಪಾವತಿ ಮಾಡುವ ಬಗ್ಗೆ ನನ್ನನ್ನು ಕೇಳುತ್ತಾರೆ. ಹೀಗಾಗಿ ನೇಮಿಸಿರುವ ಆಡಳಿತಾಧಿಕಾರಿ ಹಣವನ್ನು ನಿಮ್ಮ ಖಾತೆಯಿಂದ ಪಡೆಯುವ ಅವಕಾಶ ಇದೆ ಎಂದು ಹೇಳಿದರು.ನಿಮ್ಮೊಂದಿಗೆ ನಾನು ಸಾಕಷ್ಟು ಬಾರಿ ಚರ್ಚೆ ನಡೆಸಿದ್ದೇನೆ, ಆದರೆ ಪೂರ್ಣ ತನಿಖೆ ಮುಗಿಯದೆ ಏನೂ ಮಾಡಲು ಸಾಧ್ಯವಿಲ್ಲ. ಎಲ್ಲರೂ ಪಂಜಾಬ್, ಮಹಾರಾಷ್ಟ್ರ ಆಪರೇಟಿವ್ ಬ್ಯಾಂಕ್ ಬಗ್ಗೆ ಉದಾಹರಣೆ ನೀಡುತ್ತಾರೆ ಆದರೆ ಅದರಲ್ಲೂ ಸಾಕಷ್ಟು ಸಮಯ ತೆಗೆದುಕೊಂಡಿತ್ತು ಎಂದರು.

ಬೆಂಗಳೂರಿನ ಬಸವನಗುಡಿಯಲ್ಲಿರುವ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಮೇಲೆ ಆರ್‌ಬಿಐ ಆರು ತಿಂಗಳು ನಿರ್ಬಂಧ ವಿಧಿಸಿತ್ತು. ಬ್ಯಾಂಕ್‌ ಗ್ರಾಹಕರಿಗೆ ನೀಡಿರುವ ಸಾಲದ ಪ್ರಮಾಣವು ಆರ್‌ಬಿಐ ಮಿತಿಗಿಂತ ಹೆಚ್ಚಾಗಿದ್ದು, ವಸೂಲಾಗದ ಸಾಲ (ಎನ್‌ಪಿಎ) ಮಟ್ಟವು ನಿಗದಿತ ಮಿತಿಗಿಂತ ಹೆಚ್ಚಾಗಿರುವುದು ಸಮಸ್ಯೆಯಾಗಿದೆ. 

SCROLL FOR NEXT