ವಾಣಿಜ್ಯ

2023 ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಶೇ.6.8ಕ್ಕೆ ಏರುವ ನಿರೀಕ್ಷೆ, ಹಣದುಬ್ಬರ ಮುಖ್ಯ ಸಮಸ್ಯೆ: ಆರ್ ಬಿಐ ಗವರ್ನರ್

Sumana Upadhyaya

ನವದೆಹಲಿ: ಭೌಗೋಳಿಕ ರಾಜಕೀಯ ಉದ್ವಿಗ್ನತೆ, ಜಾಗತಿಕ ಮಟ್ಟದಲ್ಲಿ ಆರ್ಥಿಕತೆ ಮಂದಗತಿಯಲ್ಲಿ ಸಾಗುತ್ತಿರುವುದು ಮತ್ತು ಆರ್ಥಿಕ ಪರಿಸ್ಥಿತಿಗಳ ಬಿಗಿತದ ನಡುವೆ, 2022-23 ರ ಭಾರತದ ನೈಜ ಜಿಡಿಪಿ ಬೆಳವಣಿಗೆಯು ಶೇಕಡಾ 6.8 ರಷ್ಟಿರುವ ನಿರೀಕ್ಷೆಯಿದೆ. ಮೂರನೇ ತ್ರೈಮಾಸಿಕದಲ್ಲಿ ಶೇಕಡಾ 4.4 ಮತ್ತು ಕೊನೆಯ ತ್ರೈಮಾಸಿಕದಲ್ಲಿ ಶೇಕಡಾ 4.2 ರಷ್ಟಾಗಬಹುದು ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. 

ಅಪಾಯಗಳು ಸಮವಾಗಿ ಸಮತೋಲಿತವಾಗಿವೆ. ನೈಜ ಜಿಡಿಪಿ ಬೆಳವಣಿಗೆಯು 2024ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇಕಡಾ 7.1 ಮತ್ತು ಎರಡನೇ ತ್ರೈಮಾಸಿಕದಲ್ಲಿ ಶೇಕಡಾ 5.9 ರಷ್ಟಾಗಬಹುದು ಎಂದು ನಿರೀಕ್ಷಿಸಲಾಗಿದೆ. 2022- 23 ರ ನಂತರ ಭಾರತವು ಇನ್ನೂ ವೇಗವಾಗಿ ಬೆಳೆಯುತ್ತಿದ್ದು, ವಿಶ್ವದ ಪ್ರಮುಖ ಆರ್ಥಿಕ ದೇಶವಾಗಲಿದೆ ಎಂದು ಶಕ್ತಿಕಾಂತ್ ದಾಸ್ ಹೇಳಿದರು.

ಜಾಗತಿಕ ಆರ್ಥಿಕ ಸವಾಲುಗಳ ನಡುವೆಯೂ ಸಹ, ಭಾರತೀಯ ಆರ್ಥಿಕತೆಯು ಅದರ ಬಲವಾದ ಸ್ಥೂಲ ಆರ್ಥಿಕ ಮೂಲಭೂತ ಅಂಶಗಳಿಂದ ಚೇತರಿಸಿಕೊಳ್ಳುತ್ತಿದೆ ಎಂದು ವಿತ್ತೀಯ ನೀತಿ ಸಮಿತಿ (ಎಂಪಿಸಿ) ಸಭೆಯ ಪ್ರಮುಖ ನಿರ್ಧಾರಗಳನ್ನು ಪ್ರಕಟಿಸುವಾಗ ಶಕ್ತಿಕಾಂತ್ ದಾಸ್ ಇಂದು ಹೇಳಿದರು. ಇತರ ದೇಶಗಳಂತೆ ಭಾರತಕ್ಕೆ ಹಣದುಬ್ಬರವು ಪ್ರಮುಖ ಸಮಸ್ಯೆಯಾಗಿದೆ ಎಂದರು.

ನಮ್ಮ ಹಣಕಾಸು ವ್ಯವಸ್ಥೆಯು ದೃಢವಾಗಿ ಮತ್ತು ಸ್ಥಿರವಾಗಿ ಉಳಿದಿದೆ. ಕಾರ್ಪೊರೇಟ್ ವಲಯಗಳು ಬಿಕ್ಕಟ್ಟಿನಿಂದ ಹೊರಬರುತ್ತಿವೆ.  ಎಂಟು ತಿಂಗಳಿನಿಂದ ಬ್ಯಾಂಕ್ ಸಾಲವು ಎರಡಂಕಿಯಲ್ಲಿ ಬೆಳೆಯುತ್ತಿದೆ. ಕತ್ತಲೆಯಾದ ಜಗತ್ತಿನಲ್ಲಿ ಭಾರತವನ್ನು ಪ್ರಕಾಶಮಾನವಾದ ತಾಣವಾಗಿ ನೋಡಲಾಗುತ್ತಿದೆ. ಆದರೂ ಪ್ರಪಂಚದ ಹೆಚ್ಚಿನ ಭಾಗದಲ್ಲಿ ಹಣದುಬ್ಬರವು ಹೆಚ್ಚುತ್ತಲೇ ಇದೆ ಎಂದರು. 

ಹಣಕಾಸು ವರ್ಷ 2023 ರಲ್ಲಿ ಭಾರತದ ಪ್ರಮುಖ ಹಣದುಬ್ಬರವನ್ನು 6.7 ಶೇಕಡಾ ಎಂದು ಅಂದಾಜಿಸಿದ್ದಾರೆ, ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಪ್ರಕಾರ, ವಿಶ್ವದ ಆರ್ಥಿಕತೆಯ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಈ ವರ್ಷ ಅಥವಾ ಮುಂದಿನ ವರ್ಷ ಸಂಕುಚಿತಗೊಳ್ಳುತ್ತದೆ. ಈ ಉದ್ವಿಗ್ನತೆಗಳಿಂದಾಗಿ ಉದಯೋನ್ಮುಖ ಆರ್ಥಿಕತೆಗಳು ಹೆಚ್ಚು ಪರಿಣಾಮ ಬೀರಿವೆ.

ವಿತ್ತೀಯ ಆರ್ಥಿಕ ನೀತಿ ಸಭೆಯಲ್ಲಿ ಇಂದು ರೆಪೊ ದರವನ್ನು 35 ಬೇಸಿಸ್ ಪಾಯಿಂಟ್‌ ಅಂದರೆ ಶೇಕಡಾ 6.25ಕ್ಕೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಹೆಚ್ಚಿಸಲಾಗಿದೆ.

SCROLL FOR NEXT