ವಾಣಿಜ್ಯ

ಹಣದುಬ್ಬರ ನಿಯಂತ್ರಣದಲ್ಲಿದೆ, ಸರ್ಕಾರ ಅದನ್ನು ಇನ್ನಷ್ಟು ತಗ್ಗಿಸುತ್ತದೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

Srinivas Rao BV

ನವದೆಹಲಿ: ಹಣದುಬ್ಬರ ನಿಯಂತ್ರಣದಲ್ಲಿದೆ, ಸರ್ಕಾರ ಅದನ್ನು ಇನ್ನಷ್ಟು ತಗ್ಗಿಸುತ್ತದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 

ದೇಶದ ಆರ್ಥಿಕತೆಯ ಸ್ಥಿತಿಯನ್ನು ಉಲ್ಲೇಖಿಸಿ ಸಂಸತ್ ನಲ್ಲಿ ಟಿಎಂಸಿ ನಾಯಕ ಮೊಹುವಾ ಮೊಯಿತ್ರಾ, ವಿತ್ತ ಸಚಿವರಿಗೆ ಈಗ ಪಪ್ಪು ಯಾರು? ಎಂದು ಪ್ರಶ್ನಿಸಿದ್ದರು. 

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಮೊಯಿತ್ರಾ ಅವರು ತಮ್ಮದೇ ತವರು ರಾಜ್ಯದಲ್ಲಿ ಪರಿಸ್ಥಿತಿ ಏನಾಗಿದೆ ಎಂಬುದನ್ನು ನೋಡಿಕೊಳ್ಳಲಿ, ಪಶ್ಚಿಮ ಬಂಗಾಳ ಕೇಂದ್ರದ ನೀತಿಗಳನ್ನು ಜಾರಿಗೊಳಿಸಿಲ್ಲ. ಕೇಂದ್ರದ ನೀತಿಯಿಂದ ಬಂಗಾಳದ ಮಂದಿಗೆ ಉಪಯೋಗವಾಗುತ್ತಿತ್ತು ಎಂದು ಹೇಳಿದ್ದಾರೆ. 

ಇದೇ ವೇಳೆ ಸರ್ಕಾರವನ್ನು ಸಮರ್ಥಿಸಿಕೊಂಡಿರುವ ವಿತ್ತ ಸಚಿವರು, ಹಣದುಬ್ಬರ ಇಳಿಕೆಯಾಗಿದ್ದು, ಈಗ ಆರ್ ಬಿಐ ನ ಅಂದಾಜಿನಷ್ಟಿದೆ. ಇದನ್ನು ಮತ್ತಷ್ಟು ಇಳಿಕೆ ಮಾಡಲು ಸರ್ಕಾರ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಹೇಳಿದ್ದಾರೆ. 

ನವೆಂಬರ್-2022 ರ ಗ್ರಾಹಕ-ಬೆಲೆ ಆಧಾರಿತ ಹಣದುಬ್ಬರ ಶೇ.5.8 ರಷ್ಟಿದ್ದು, ಹಣದುಬ್ಬರದ ಬಗ್ಗೆ ವಿಪಕ್ಷಗಳು ಆತಂಕ ವ್ಯಕ್ತಪಡಿಸುವಾಗ ಅದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತದೆ ಎಂದು ವಿಪಕ್ಷಗಳಿಗೆ ತಿವಿದಿದ್ದಾರೆ. ಇನ್ನು ಯುಪಿಎ ಅವಧಿಯ ಅಂಕಿ-ಅಂಶಗಳನ್ನು ನೀಡಿರುವ ವಿತ್ತ ಸಚಿವರು, 2013 ರಲ್ಲಿ ಹಣದುಬ್ಬರ ಶೇ.19.33 ರಷ್ಟಿತ್ತು ಎಂದು ಹೇಳಿದ್ದಾರೆ. 

SCROLL FOR NEXT