ವಾಣಿಜ್ಯ

ಓಲಾ-ಉಬರ್ ಜೊತೆಗೂಡುವುದಿಲ್ಲ: ವಿಲೀನ ಕುರಿತ ಊಹಾಪೋಹಕ್ಕೆ ಓಲಾ ಸಿಇಒ ತೆರೆ

Srinivasamurthy VN

ನವದೆಹಲಿ: ಖ್ಯಾತ ಟ್ಯಾಕ್ಸಿ ಸೇವಾ ಪೂರೈಕೆದಾರ ಸಂಸ್ಥೆಗಳಾದ ಓಲಾ ಮತ್ತು ಉಬರ್ ಸಂಸ್ಥೆಗಳು ವಿಲೀನಗೊಳ್ಳುತ್ತವೆ ಎಂಬ ಊಹಾಪೋಹಗಳಿಗೆ ಓಲಾ ಸಿಇಒ ಭವೀಷ್ ಅಗರ್ವಾಲ್ ಅವರು ತೆರೆ ಎಳೆದಿದ್ದು, ಅಂತಹ ಯಾವುದೇ ಪ್ರಸ್ತಾಪ ತಮ್ಮ ಮುಂದಿಲ್ಲ ಎಂದು ಹೇಳಿದ್ದಾರೆ.

ಕ್ಯಾಬ್ ಸೇವೆ ನೀಡುವ ಕಂಪನಿಗಳಾದ ಓಲಾ ಹಾಗೂ ಉಬರ್ ಟೆಕ್ನಾಲಜೀಸ್ ವಿಲೀನವಾಗುವ ಸಾಧ್ಯತೆ ಇದ್ದು, ಮಾತುಕತೆ ನಡೆಯುತ್ತಿದೆ. ಓಲಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಿಷ್ ಅಗರ್‌ವಾಲ್ ಇತ್ತೀಚೆಗೆ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಉಬರ್‌ನ ಉನ್ನತ ಅಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ವಿಲೀನ ಒಪ್ಪಂದ ಸಾಧ್ಯತೆಗೆ ಸಂಬಂಧಿಸಿದ ಹಣಕಾಸು ವಿವರಗಳನ್ನು ವರದಿ ಉಲ್ಲೇಖಿಸಿಲ್ಲ ಎಂದು ವರದಿಯಾಗಿತ್ತು. 

ಈ ವರದಿ ವೈರಲ್ ಆಗುತ್ತಲೇ ಈ ಕುರಿತು ಸ್ಪಷ್ಟನೆ ನೀಡಿರುವ ಓಲಾ ಸಿಇಒ ಭವೀಶ್ ಅಗರ್ವಾಲ್ ಅವರು, ಓಲಾ ಸಂಸ್ಥೆ "ಅತ್ಯಂತ ಲಾಭದಾಯಕ'' ಮತ್ತು ''ಉತ್ತಮವಾಗಿ ಬೆಳೆಯುತ್ತಿದೆ" ಮತ್ತು ಅಮೇರಿಕನ್ ರೈಡ್-ಹೇಲಿಂಗ್ ಸಂಸ್ಥೆಯೊಂದಿಗೆ ವಿಲೀನ ಮಾತುಕತೆಗಳ ವರದಿಗಳು "ಸಂಪೂರ್ಣ ಸತ್ಯಕ್ಕೆ ದೂರವಾದದ್ದು ಎಂದು ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, 'ಸಂಪೂರ್ಣ ಉಪಯೋಗಕ್ಕೆ ಬಾರದ್ದು, ನಾವು ತುಂಬಾ ಲಾಭದಾಯಕವಾಗಿದ್ದೇವೆ ಮತ್ತು ಉತ್ತಮವಾಗಿ ಬೆಳೆಯುತ್ತಿದ್ದೇವೆ. ಕೆಲವು ಇತರ ಕಂಪನಿಗಳು ತಮ್ಮ ವ್ಯವಹಾರವನ್ನು ಭಾರತದಿಂದ ನಿರ್ಗಮಿಸಲು ಬಯಸಿದರೆ ಅವರಿಗೆ ಸ್ವಾಗತ! ನಾವು ಎಂದಿಗೂ ವಿಲೀನಗೊಳ್ಳುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಉಭಯ ಕಂಪನಿಗಳು ಭಾರತದ ಮಾರುಕಟ್ಟೆಯಲ್ಲಿ ತೀವ್ರ ಸ್ಪರ್ಧೆ ಎದುರಿಸುತ್ತಿದ್ದು, ಪ್ರಯಾಣಿಕರಿಗೆ ರಿಯಾಯಿತಿ ದರದ ಕೊಡುಗೆಗಳನ್ನು ನೀಡುವುದಕ್ಕಾಗಿಯೇ ನೂರಾರು ಕೋಟಿ ಖರ್ಚು ಮಾಡಿವೆ. ಆಹಾರೋತ್ಪನ್ನ ಮತ್ತು ದಿನಸಿ ವಸ್ತುಗಳ ವಿತರಣೆ ಸೇವೆಯನ್ನೂ ಉಭಯ ಕಂಪನಿಗಳು ಇತ್ತೀಚೆಗೆ ಆರಂಭಿಸಿದ್ದವು.

SCROLL FOR NEXT