ವಾಣಿಜ್ಯ

ರಿಲಯನ್ಸ್ ಜಿಯೋಗೆ ಮುಖೇಶ್ ಅಂಬಾನಿ ರಾಜೀನಾಮೆ, ಮಗ ಆಕಾಶ್ ನೂತನ ಅಧ್ಯಕ್ಷ

Lingaraj Badiger

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಮುಖೇಶ್ ಅಂಬಾನಿ ಅವರು ತಮ್ಮ ಸಮೂಹದ ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋ ಮಂಡಳಿಗೆ ರಾಜೀನಾಮೆ ನೀಡಿದ್ದು, ಜಿಯೋ ಕಂಪನಿಯ ಆಡಳಿತವನ್ನು ತಮ್ಮ ಹಿರಿಯ ಮಗ ಆಕಾಶ್‌ಗೆ ಹಸ್ತಾಂತರಿಸಿದ್ದಾರೆ. 

ಸ್ಟಾಕ್ ಎಕ್ಸ್‌ಚೇಂಜ್ ಫೈಲಿಂಗ್‌ನಲ್ಲಿ, ರಿಲಯನ್ಸ್ ಜಿಯೋ ಇನ್ಫೋಕಾಮ್ ಜೂನ್ 27 ರಂದು ನಡೆದ ಸಭೆಯಲ್ಲಿ ಕಂಪನಿಯ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿದ್ದ ಆಕಾಶ್ ಎಂ ಅಂಬಾನಿ ಅವರನ್ನು ಕಂಪನಿಯ ನಿರ್ದೇಶಕರ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಲು ಒಪ್ಪಿಗೆ ನೀಡಿದೆ" ಎಂದು ತಿಳಿಸಿದೆ.

ಮುಕೇಶ್ ಅಂಬಾನಿ ಅವರು ತಮ್ಮ ಪುತ್ರ ಆಕಾಶ್ ಅಂಬಾನಿ ಅವರಿಗೆ ರಿಲಯನ್ಸ್ ಜಿಯೋ ಸಂಸ್ಥೆಯನ್ನು ಮುನ್ನೆಡೆಸಲು ಅವಕಾಶ ಕಲ್ಪಿಸಿಕೊಡಲು ಜೂನ್ 27, 2022 ರಂದು ಕಂಪನಿಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಆಕಾಶ್ ಅಂಬಾನಿ ಅವರು ಕಂಪನಿಯ ನಿರ್ದೇಶಕರ ಮಂಡಳಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಇತರ ನೇಮಕಾತಿಗಳಲ್ಲಿ, ಪಂಕಜ್ ಮೋಹನ್ ಪವಾರ್ ಅವರನ್ನು ಜೂನ್ 27 ರಿಂದ ಐದು ವರ್ಷಗಳ ಕಾಲ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಿಸಲಾಗಿದೆ. ಅಲ್ಲದೆ ರಮೀಂದರ್ ಸಿಂಗ್ ಗುಜ್ರಾಲ್ ಮತ್ತು ಕೆವಿ ಚೌಧರಿ ಅವರನ್ನು ಸ್ವತಂತ್ರ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.

SCROLL FOR NEXT