ವಾಣಿಜ್ಯ

ಮೆಟಾ ಭಾರತದ ನೂತನ ಮುಖ್ಯಸ್ಥರಾಗಿ ಸಂಧ್ಯಾ ದೇವನಾಥನ್ ನೇಮಕ

Srinivasamurthy VN

ನವದೆಹಲಿ: ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾದ ಭಾರತ ಮುಖ್ಯಸ್ಥೆಯಾಗಿ ಸಂಧ್ಯಾ ದೇವನಾಥನ್‌ ಅವರನ್ನು ನೇಮಕ ಮಾಡಲಾಗಿದೆ. 

ಈ ಹಿಂದೆ ಸಂಸ್ಥೆಗೆ ಮೇಜರ್ ಸರ್ಜರಿ ಮಾಡಿದ್ದ ಮೆಟಾ, ಘಟಾನುಘಟಿ ನಾಯಕರನ್ನು ಕೆಲಸದಿಂದ ವಜಾ ಮಾಡಿತ್ತು. ಇದೀಗ ಅವರ ನಿರ್ಗಮನದಿಂದ ತೆರವಾಗಿರುವ ಸ್ಥಾನಗಳಿಗೆ ನೇಮಕಾತಿ ಆರಂಭಿಸಿದ್ದು, ಮೆಟಾ ಭಾರತದ ಮುಖ್ಯಸ್ಥೆಯಾಗಿ  ಸಂಧ್ಯಾ ದೇವನಾಥನ್‌ ಅವರು ನೇಮಕವಾಗಿದ್ದಾರೆ. ಈ ಪ್ರತಿಷ್ಠಿತ ಹುದ್ದೆಯನ್ನು ಅವರು 2023ರ ಜನವರಿ 1 ರಿಂದ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

ಜಾಗತಿಕ ಉದ್ಯಮದಲ್ಲಿ 22 ವರ್ಷಗಳ ಅನುಭವ ಹೊಂದಿರುವ ಸಂಧ್ಯಾ ದೇವನಾಥನ್ ಅವರು, ಬ್ಯಾಂಕಿಂಗ್‌, ಪಾವತಿ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಅಗಾಧ ಪರಿಣತಿ ಹೊಂದಿದ್ದಾರೆ. 

2000ನೇ ಇಸವಿಯಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪಡೆದಿರುವ ಅವರು, 2016ರಲ್ಲಿ ‌ಫೇಸ್‌ಬುಕ್‌ ಸೇರಿದ್ದರು. ಸಿಂಗಾಪುರ ಹಾಗೂ ವಿಯೇಟ್ನಾಂನಲ್ಲಿ ಫೇಸ್‌ಬುಕ್‌ನ ಉದ್ಯಮ ವಿಸ್ತರಿಸುವಲ್ಲಿ ಸಂಧ್ಯಾ ಪ್ರಮುಖ ಪಾತ್ರ ವಹಿಸಿದ್ದರು. 2020ರಲ್ಲಿ ಏಷ್ಯಾ ಪೆಸಿಫಿಕ್‌ ವಲಯದಲ್ಲಿ ಉದ್ಯಮ ವಿಸ್ತರಣೆ ಮಾಡುವ ಮೆಟಾದ ಯೋಜನೆಯಲ್ಲಿ ಸಂಧ್ಯಾ ಪ್ರಮುಖ ಪಾತ್ರ ವಹಿಸಿದ್ದರು.

ಮಹಿಳಾ ಮುಂದಾಳತ್ವದ ಬಗ್ಗೆ ಅಪಾರ ಒಲವಿರುವ ಅವರು, ಕಚೇರಿಯಲ್ಲಿ ವೈವಿಧ್ಯತೆಗೆ ಒತ್ತು ನೀಡುತ್ತೇನೆ ಎಂದು ತಮ್ಮ ಲಿಂಕ್ಡ್‌ ಇನ್‌ನಲ್ಲಿ ಬರೆದುಕೊಂಡಿದ್ದಾರೆ. ಪೆಪ್ಪರ್‌ ಫಿನಾನ್ಷಿಯಲ್‌ ಸರ್ವೀಸಸ್‌ನ ಜಾಗತಿಕ ಬೋರ್ಡ್‌ ಸದಸ್ಯೆಯಾಗಿಯೂ ಸಂಧ್ಯಾ ಅವರು ಕಾರ್ಯ ನಿರ್ವಹಿಸಿದ್ದಾರೆ.
 

SCROLL FOR NEXT