ವಾಣಿಜ್ಯ

ನೀವು ಹನುಮಂತನ ರೀತಿಯೇ? ಇಂಡಿಯಾ ಐಎನ್ ಸಿಗೆ ವಿತ್ತ ಸಚಿವರು ಹೀಗೇಕೆ ಕೇಳಿದ್ದು ಅಂದರೆ...

Srinivas Rao BV

ನವದೆಹಲಿ: ಉತ್ಪಾದನಾ ಕ್ಷೇತ್ರದಲ್ಲಿ ಹೂಡಿಕೆ ಮಾಡುವುದರಿಂದ  ಇಂಡಿಯಾ ಐಎನ್ ಸಿ ಹಿಂಜರಿಯುತ್ತಿರುವುದನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಶ್ನಿಸಿದ್ದಾರೆ. 

ವಿದೇಶಿ ಹೂಡಿಕೆದಾರರು ಭಾರತದೆಡೆಗೆ ವಿಶ್ವಾಸ ತೋರುತ್ತಿದ್ದರೆ ಭಾರತದ ಉದ್ಯಮಗಳೇ ಏಕೆ ಉತ್ಪಾದನಾ ಕ್ಷೇತ್ರದಲ್ಲಿ ಹೂಡಿಕೆ ಮಾಡುವುದರಿಂದ ಹಿಂಜರಿಯುತ್ತಿವೆ ಎಂದು ಕೇಳಿರುವ ನಿರ್ಮಲಾ ಸೀತಾರಾಮನ್ ಇಂಡಿಯಾ ಐಎನ್ ಸಿಗೂ ಹನುಮಂತನಿಗೂ ಹೋಲಿಕೆ ಮಾಡಿದ್ದಾರೆ.

ಸರ್ಕಾರ ಉದ್ಯಮಗಳಿಗೆ ನೆರವಾಗಲು ಬಯಸುತ್ತಿದ್ದು, ನೀತಿ ಕ್ರಮಗಳನ್ನು ತೆಗೆದುಕೊಳ್ಳಲಿದೆ. ಇದು ಭಾರತಕ್ಕೆ ಮಹತ್ವದ ಸಮಯವಾಗಿದ್ದು, ಈ ಸಮಯವನ್ನು ನಾವು ಕಳೆದುಕೊಳ್ಳಲು ಸಿದ್ಧರಿಲ್ಲ ಎಂದು ಸೀತಾರಾಮನ್ ಹೇಳಿದ್ದಾರೆ.

ಉತ್ಪಾದನಾ ಸಂಬಂಧಿತ ಪ್ರೋತ್ಸಾಹ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದ್ದು, ಈ ಮೂಲಕ ಉತ್ಪಾದನೆ ವಲಯದಲ್ಲಿ ಹೂಡಿಕೆ ಹೆಚ್ಚು ಮಾಡಲು ಸಹಕಾರಿಯಾಗುವ ನಿಟ್ಟಿನಲ್ಲಿ ತೆರಿಗೆಗಳನ್ನು ಕಡಿತಗೊಳಿಸಲಾಗಿದೆ ಎಂದು ಸೀತಾರಾಮನ್ ಮಾಹಿತಿ ನೀಡಿದ್ದಾರೆ.

ಯಾವುದೇ ನೀತಿ ಜಾರಿಗೆ ತಂದ ರೀತಿಯಲ್ಲೇ ಅಂತ್ಯಗೊಳ್ಳಲು ಸಾಧ್ಯವಿಲ್ಲ ನಾವು ಮುಂದೆ ಹೋದಂತೆಲ್ಲಾ ಅದೂ ವಿಕಸನಗೊಳ್ಳುತ್ತಿರುತ್ತದೆ. ಇದು ಉದ್ಯಮಕ್ಕೂ ಅನ್ವಯಿಸುತ್ತದೆ. 

ಉದ್ಯಮ ಕ್ಷೇತ್ರ ಉತ್ಪಾದನಾ ಕ್ಷೇತ್ರದಲ್ಲಿ ಹೂಡಿಕೆ ಮಾಡುವುದಕ್ಕೆ ಏನು ಬೇಕೋ ಅವೆಲ್ಲವನ್ನೂ ನಾವು ವ್ಯವಸ್ಥೆ ಮಾಡುತ್ತೇವೆ. ಆದರೆ ಹೂಡಿಕೆ ಮಾಡುವುದರಿಂದ ಇಂಡಿಯಾ ಐಎನ್ ಸಿಯನ್ನು ತಡೆಯುತ್ತಿರುವುದು ಏನು ಎಂಬುದನ್ನು ತಿಳಿದುಕೊಳ್ಳಬೇಕಿದೆ. ನೀವು ಹನುಮಂತನ ರೀತಿಯವರೇ? ನಿಮ್ಮ ಸ್ವಂತ ಸಾಮರ್ಥ್ಯವನ್ನು ನೀವೇ ನಂಬುವುದಿಲ್ಲವೇ? ಮತ್ತೊಬ್ಬರು ಪಕ್ಕದಲ್ಲಿ ನಿಂತು ನೀನು ಹನುಮಂತನಿದ್ದೀಯ ನಿನ್ನಿಂದ ಸಾಧ್ಯ ಎಂದು ಹೇಳಬೇಕೆ? ಹನುಮಂತನಿಗೆ ಹೇಳುವ ವ್ಯಕ್ತಿ ಯಾರು? ಅದು ಖಂಡಿತವಾಗಿಯೂ ಸರ್ಕಾರವಾಗಿರಲು ಸಾಧ್ಯವಿಲ್ಲ ಎಂದು ಸೀತಾರಾಮನ್ ಹೇಳಿದ್ದಾರೆ.

SCROLL FOR NEXT