ನವದೆಹಲಿ: ಜಾಗತಿಕವಾಗಿ ಆರ್ಥಿಕತೆ ನಿಧಾನಗತಿಯಲ್ಲಿರುವ ನಡುವೆ ಭಾರತದ ಒಟ್ಟಾರೆ ವ್ಯಾಪಾರ ಕೊರತೆ 2023 ರಲ್ಲಿ 122 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ. ಕಳೆದ ವರ್ಷ ಇದು 83 ಬಿಲಿಯನ್ ಡಾಲರ್ ನಷ್ಟಿತ್ತು.
ವಾಣಿಜ್ಯ ಸಚಿವಾಲಯದ ಡೇಟಾ ಪ್ರಕಾರ, ಈ ಎಲ್ಲಾ ಅಂಶಗಳ ಹೊರತಾಗಿಯೂ ರಫ್ತು ಪ್ರಮಾಣ 770 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದ್ದು, ಇದು 2022 ರಲ್ಲಿ 676 ಬಿಲಿಯನ್ ಡಾಲರ್ ಇತ್ತು.
2023 ರಲ್ಲಿ 750 ಬಿಲಿಯನ್ ಡಾಲರ್ ರಫ್ತು ಗುರಿ ಹೊಂದಲಾಗಿತ್ತು. ಆದರೆ ಗುರಿ ಇದ್ದದ್ದಕ್ಕಿಂತಲೂ 20 ಬಿಲಿಯನ್ ಡಾಲರ್ ಹೆಚ್ಚು ರಫ್ತು ಮಾಡಲಾಗಿದೆ. ಜಾಗತಿಕ ಪರಿಸ್ಥಿತಿಗಳ ಹೊರತಾಗಿಯೂ ಭಾರತವು ವಾರ್ಷಿಕ ವ್ಯಾಪಾರದಲ್ಲಿ $ 94 ಶತಕೋಟಿ ಜಿಗಿತವನ್ನು ದಾಖಲಿಸಿದೆ ಎಂದು ವಾಣಿಜ್ಯ ಕಾರ್ಯದರ್ಶಿ ಸುನಿಲ್ ಬಾರ್ಥ್ವಾಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಇದನ್ನೂ ಓದಿ: 2022-23ನೇ ಸಾಲಿನಲ್ಲಿ 15,920 ಕೋಟಿ ರೂ. ರಕ್ಷಣಾ ಪರಿಕರ ರಫ್ತು; ಭಾರತ ಮಹತ್ತರ ಸಾಧನೆ: ರಾಜನಾಥ್ ಸಿಂಗ್
2023 ಆರ್ಥಿಕ ವರ್ಷದಲ್ಲಿ ಒಟ್ಟಾರೆ ಆಮದುಗಳು 17.38% ರಷ್ಟು ಏರಿಕೆಯಾಗಿ $892.18 ಶತಕೋಟಿಗೆ ತಲುಪಿದೆ.
ಕಳೆದ ವರ್ಷ ಇದೇ ತಿಂಗಳಿನಲ್ಲಿ $44 ಶತಕೋಟಿ ಇದ್ದ ಸರಕು ರಫ್ತುಗಳು ಮಾರ್ಚ್ 2023 ರಲ್ಲಿ $38 ಶತಕೋಟಿಗೆ ಅಂದರೆ 14% ಕುಸಿದಿದೆ. ತಿಂಗಳಲ್ಲಿ ವ್ಯಾಪಾರದ ಕೊರತೆಯು 6.5% ರಿಂದ $20 ಶತಕೋಟಿಗೆ ಏರಿದ್ದು, 2023 ರಲ್ಲಿ, ಒಟ್ಟಾರೆ ಸರಕು ರಫ್ತುಗಳು 6% ನಷ್ಟು $447.5 ಶತಕೋಟಿಗೆ ಏರಿದೆ.