ವಾಣಿಜ್ಯ

ಆರ್ಥಿಕ ಹಿಂಜರಿತ: ಜನವರಿ ಒಂದೇ ತಿಂಗಳಲ್ಲಿ 1 ಲಕ್ಷಕ್ಕೂ ಅಧಿಕ ಟೆಕಿಗಳ ಉದ್ಯೋಗ ಕಡಿತ!

Srinivasamurthy VN

ನವದೆಹಲಿ: ಜಾಗತಿಕ ಆರ್ಥಿಕ ಹಿಂಜರಿತ ಮತ್ತು ಔದ್ಯೋಗಿಕ ವಲಯದ ಹಿನ್ನಡೆಯಿಂದಾಗಿ ಜಗತ್ತಿನಾದ್ಯಂತ ಉದ್ಯೋಗ ಕಳೆದುಕೊಳ್ಳುತ್ತಿರುವವರ ಸಂಖ್ಯೆ ದಿನೇ ದಿನೇ ಗಣನೀಯವಾಗಿ ಹೆಚ್ಚಾಗುತ್ತಿದ್ದು, ಭಾರತದಲ್ಲಿ ಕೇವಲ ಒಂದೇ ತಿಂಗಳ ಅವಧಿಯಲ್ಲಿ ಬರೊಬ್ಬರಿ 1 ಲಕ್ಷ ಟೆಕಿಗಳು ಉದ್ಯೋಗ ಕಳೆದುಕೊಂಡಿದ್ದಾರೆ ಎಂಬ ಆಘಾತಕಾರಿ ವರದಿ ಹೊರ ಬಿದ್ದಿದೆ.

ಹೌದು.. ಜಾಗತಿಕವಾಗಿ ಜನವರಿ ಒಂದೇ ತಿಂಗಳಲ್ಲಿ ಬರೋಬ್ಬರಿ 1 ಲಕ್ಷ ಟೆಕ್‌ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದು, ಅಂದರೆ ನಿತ್ಯ ಸರಾಸರಿ 3,300 ಮಂದಿ ಕೆಲಸ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. 

ಉದ್ಯೋಗ ಕಡಿತಕ್ಕೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಿರುವ Layoffs.fyi ವೆಬ್‌ಸೈಟ್‌ ಈ ಬಗ್ಗೆ ವರದಿ ಪ್ರಕಟಿಸಿದ್ದು, 2022ರಲ್ಲಿ ಒಂದು ಸಾವಿರಕ್ಕೂ ಹೆಚ್ಚು ಕಂಪನಿಗಳು 1,54,336 ಉದ್ಯೋಗಿಗಳನ್ನು ವಜಾ ಮಾಡಿವೆ.

ಜನವರಿ ತಿಂಗಳಲ್ಲಿ ಪ್ರಪಂಚದಾದ್ಯಂತ ಸುಮಾರು 288 ಟೆಕ್‌ ಕಂಪನಿಗಳು ಉದ್ಯೋಗ ಕಡಿತ ಮಾಡಿವೆ. ಇ–ಕಾಮರ್ಸ್‌ ಕ್ಷೇತ್ರದ ದೈತ್ಯ ಕಂಪನಿ ಅಮೆಜಾನ್‌ ( 18,000), ತಂತ್ರಜ್ಞಾನ ಕ್ಷೇತ್ರದ ದೊಡ್ಡ ಕಂಪನಿಗಳಾದ ಗೂಗಲ್‌ (12,000) ಹಾಗೂ ಮೈಕ್ರೊಸಾಫ್ಟ್‌ (10,000) ಅತಿಹೆಚ್ಚು ಟೆಕ್‌ ಉದ್ಯೋಗಿಗಳನ್ನು ವಜಾ ಮಾಡಿವೆ. ನಂತರದ ಸ್ಥಾನಗಳಲ್ಲಿ ಸೇಲ್ಸ್‌ಫೋರ್ಸ್‌ (7,000), ಐಬಿಎಂ (3,900) ಹಾಗೂ ಸ್ಯಾಪ್‌ (3,000) ಕಂಪನಿಗಳಿವೆ ಎಂದು  ಹೇಳಿದೆ.

ಮತ್ತೊಂದು ವರದಿಯಲ್ಲಿ 2023 ರ ಜನವರಿಯಲ್ಲಿ ಟೆಕ್ ಉದ್ಯಮದಾದ್ಯಂತ ಸುಮಾರು 106,950 ಉದ್ಯೋಗಿಗಳು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ ಎಂದು Trueup.io ವರದಿ ಮಾಡಿದ್ದು, ಇದು ನವೆಂಬರ್ ಮತ್ತು ಡಿಸೆಂಬರ್ 2023 ರಲ್ಲಿ ಸಂಯೋಜಿತ ಉದ್ಯೋಗ ನಷ್ಟಕ್ಕಿಂತ ಕೆಟ್ಟದಾಗಿದೆ ಎಂದು ಹೇಳಿದೆ.

2022ರಲ್ಲಿ ಒಂದು ಸಾವಿರಕ್ಕೂ ಹೆಚ್ಚು ಕಂಪನಿಗಳು 1,54,336 ಉದ್ಯೋಗಿಗಳನ್ನು ವಜಾ ಮಾಡಿದ್ದು, ಹೀಗಾಗಿ 2022ರಿಂದ ಇದುವರೆಗೆ 2.5 ಲಕ್ಷ ಟೆಕ್‌ ಉದ್ಯೋಗಿಗಳು ಕೆಲಸ ಕಳೆದುಕೊಂಡಂತಾಗಿದೆ. ಉದ್ಯೋಗ ಕಡಿತ ಮಾಡುತ್ತಿರುವ ದೊಡ್ಡ ದೊಡ್ಡ ಕಂಪನಿಗಳು ಅಸ್ಥಿರ ಜಾಗತಿಕ ಆರ್ಥಿಕ ಪರಿಸ್ಥಿತಿ, ಕೋವಿಡ್–19 ಸೃಷ್ಟಿಸಿದ ಬಿಕ್ಕಟ್ಟು, ಅತಿಯಾದ ನೇಮಕಾತಿ ಸೇರಿದಂತೆ ಹಲವು ಕಾರಣಗಳನ್ನು ನೀಡುತ್ತಿವೆ.

SCROLL FOR NEXT