ವಾಣಿಜ್ಯ

ಮಹಿಳೆ ಮೇಲೆ ಮೂತ್ರ ಪ್ರಕರಣ: ಏರ್‌ ಇಂಡಿಯಾಗೆ ಡಿಜಿಸಿಎ ತರಾಟೆ, ಶೋಕಾಸ್‌ ನೋಟಿಸ್‌ ಜಾರಿ

Lingaraj Badiger

ನವದೆಹಲಿ: ಕುಡಿದ ಮತ್ತಿನಲ್ಲಿದ್ದ ಉದ್ಯಮಿಯೊಬ್ಬರು ಮಹಿಳಾ ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಏರ್‌ ಇಂಡಿಯಾವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ), ಈ ಸಂಬಂಧ ಏರ್‌ಲೈನ್‌ನ ಮ್ಯಾನೇಜರ್, ಇನ್-ಫ್ಲೈಟ್ ಸೇವೆಗಳ ನಿರ್ದೇಶಕರಿಗೆ, ಪೈಲಟ್‌ಗಳಿಗೆ ಮತ್ತು ನ್ಯೂಯಾರ್ಕ್-ದೆಹಲಿ ವಿಮಾನದ ಕ್ಯಾಬಿನ್ ಸಿಬ್ಬಂದಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

ಈ ಪ್ರಕರಣದಲ್ಲಿ ಏರ್‌ ಇಂಡಿಯಾ ವೃತ್ತಿಪರವಾಗಿ ನಡೆದುಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ  ಡಿಜಿಸಿಎ, ಇದು ವ್ಯವಸ್ಥಿತ ವೈಫಲ್ಯಕ್ಕೆ ಕಾರಣವಾಗಿದೆ ಎಂದು ಕಠು ಶಬ್ದಗಳಿಂದ ತರಾಟೆಗೆ ತೆಗೆದುಕೊಂಡಿದೆ.

ಸಂಬಂಧಪಟ್ಟ ಮ್ಯಾನೇಜರ್, ಇನ್-ಫ್ಲೈಟ್ ಸೇವೆಗಳ ನಿರ್ದೇಶಕ, ಪೈಲಟ್‌ಗಳು ಹಾಗೂ ವಿಮಾನ ಸಿಬ್ಬಂದಿಗಳಿಗೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಲಾಗಿದ್ದು, ಉತ್ತರಿಸಲು ಎರಡು ವಾರಗಳ ಕಾಲವಕಾಶ ನೀಡಲಾಗಿದೆ.

ವಿಮಾನದಲ್ಲಿ ಅಶಿಸ್ತಿನ ಪ್ರಯಾಣಿಕರ ನಿರ್ವಹಣೆಗೆ ಸಂಬಂಧಿಸಿದಂತೆ ಇರುವ ನಿಬಂಧನೆಗಳನ್ನು ಸರಿಯಾಗಿ ಪಾಲಿಸಲಾಗಿಲ್ಲ. ಸಂಬಂಧಪಟ್ಟ ವಿಮಾನಯಾನ ಕಂಪನಿಯು ತೆಗೆದುಕೊಂಡ ನಿರ್ಧಾರ ವೃತ್ತಿಪರವಾಗಿಲ್ಲ. ಇದರಿಂದಾಗಿ ವ್ಯವಸ್ಥಿತ ವೈಫಲ್ಯ ಉಂಟಾಗಿದೆ‘ ಎಂದು ನೋಟಿಸ್‌ನಲ್ಲಿ ಹೇಳಿದೆ.

ಇಬ್ಬರೂ ರಾಜಿಯಾದ ನಂತರ 2022ರ ನವೆಂಬರ್‌ 26 ರಂದು, ನ್ಯೂಯಾರ್ಕ್-ದೆಹಲಿ ವಿಮಾನದಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಮುಂಬೈ ಉದ್ಯಮಿ ಬಗ್ಗೆ ತನ್ನ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿಲ್ಲ ಎಂದು ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಗುರುವಾರ ಡಿಜಿಸಿಎಗೆ ತಿಳಿಸಿದೆ.

ನವೆಂಬರ್ 26, 2022 ರ ಎಐ 102 ವಿಮಾನದಲ್ಲಿ ಸಂಭವಿಸಿದ ಘಟನೆಯ ವರದಿ ಕೇಳಿ ಡಿಜಿಸಿಎ ಜನವರಿ 4 ರಂದು ನೀಡಿದ್ದ ನೋಟಿಸ್‌ಗೆ ಏರ್ ಇಂಡಿಯಾ ಗುರುವಾರ ಈ ಉತ್ತರ ನೀಡಿದೆ ಎಂದು ಮೂಲಗಳು ತಿಳಿಸಿವೆ.

SCROLL FOR NEXT