ವಾಣಿಜ್ಯ

ಟಿಸಿಎಸ್ 2 ಸಾವಿರಕ್ಕೂ ಹೆಚ್ಚು ನೌಕರರನ್ನು ಒತ್ತಾಯಪೂರ್ವಕವಾಗಿ ಬೇರೆ ನಗರಗಳಿಗೆ ವರ್ಗಾಯಿಸುತ್ತಿದೆ: ಕಾರ್ಮಿಕ ಸಚಿವಾಲಯಕ್ಕೆ ದೂರು

Sumana Upadhyaya

ಚೆನ್ನೈ: ದೇಶದ ಅತಿದೊಡ್ಡ ಐಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಮತ್ತೆ ವಿವಾದದಲ್ಲಿದೆ. ಐಟಿ ಉದ್ಯೋಗಿಗಳ ಹಕ್ಕುಗಳ ಸಂಘಟನೆಯಾದ ನೇಸೆಂಟ್ ಇನ್ಫರ್ಮೇಷನ್ ಟೆಕ್ನಾಲಜಿ ಎಂಪ್ಲಾಯೀಸ್ ಸೆನೆಟ್ (NITES) ಕಂಪೆನಿಯು ಉದ್ಯೋಗಿಗಳ ಹಿತಾಸಕ್ತಿಗೆ ವಿರುದ್ಧವಾಗಿ ಕಾನೂನು ಬಾಹಿರವಾಗಿ ವರ್ಗಾವಣೆ ಮಾಡುತ್ತಿದೆ ಎಂದು ಆರೋಪಿಸಿ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯಕ್ಕೆ ಔಪಚಾರಿಕ ದೂರು ಸಲ್ಲಿಸಿದೆ.

ಈ ಬಗ್ಗೆ ಎನ್ ಐಟಿಇಎಸ್ ಪ್ರಕಟಣೆಯಲ್ಲಿ ತಿಳಿಸಿದ್ದು, ಟಿಸಿಎಸ್ ವ್ಯವಸ್ಥಿತವಾಗಿ 2,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಸರಿಯಾದ ಸೂಚನೆ ಅಥವಾ ಸಮಾಲೋಚನೆಯಿಲ್ಲದೆ ವಿವಿಧ ನಗರಗಳಿಗೆ ವರ್ಗಾವಣೆಗೆ ಒತ್ತಾಯಿಸುತ್ತಿದೆ ಎಂದು 180 ಕ್ಕೂ ಹೆಚ್ಚು ದೂರುಗಳು ಕಾರ್ಮಿಕ ಸಚಿವಾಲಯಕ್ಕೆ ಬಂದಿವೆ. ಈ ರೀತಿ ನೌಕರರನ್ನು ವರ್ಗಾವಣೆ ಮಾಡಿದರೆ ಅವರಿಗೆ ಮತ್ತು ಅವರ ಕುಟುಂಬಗಳಿಗೆ ಅಪಾರ ತೊಂದರೆ ಉಂಟಾಗುತ್ತದೆ ಎಂದು ಹೇಳಲಾಗಿದೆ. 

ವರ್ಗಾವಣೆ ನಿರ್ದೇಶನಗಳನ್ನು ಅನುಸರಿಸಲು ವಿಫಲವಾದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಕಂಪನಿಯು ಉದ್ಯೋಗಿಗಳಿಗೆ ಬೆದರಿಕೆ ಹಾಕಿದೆ ಎಂದು ಅದು ಹೇಳಿದೆ. ಈ ಬಲವಂತದ ವರ್ಗಾವಣೆಗಳು ಉದ್ಯೋಗಿಗಳಿಗೆ ಉಂಟುಮಾಡುವ ಆರ್ಥಿಕ ಸಂಕಷ್ಟ, ಕೌಟುಂಬಿಕ ಅಡ್ಡಿ, ಒತ್ತಡ ಮತ್ತು ಆತಂಕಗಳನ್ನು ಕಂಪನಿ ನಿರ್ಲಕ್ಷಿಸುತ್ತಿದೆ ಎಂದು ದೂರಿನಲ್ಲಿ ತಿಳಿಸಿದೆ. 

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನ ಅನೈತಿಕ ವರ್ಗಾವಣೆ ಅಭ್ಯಾಸಗಳ ಬಗ್ಗೆ ನಾವು ತೀವ್ರ ಕಳವಳ ಹೊಂದಿದ್ದೇವೆ. ಟಿಸಿಎಸ್ ತನ್ನ ಉದ್ಯೋಗಿಗಳನ್ನು ಅನಗತ್ಯ ಸಂಕಷ್ಟಕ್ಕೆ ಸಿಲುಕಿಸುತ್ತಿದೆ. ಅವರ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ. ನಾವು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವನ್ನು ಟಿಸಿಎಸ್ ವಿರುದ್ಧ ತನಿಖೆ ಮಾಡಲು ಮತ್ತು ಐಟಿ ಉದ್ಯೋಗಿಗಳನ್ನು ಇಂತಹ ಅನೈತಿಕ ಕ್ರಮಗಳಿಂದ ರಕ್ಷಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದೇವೆ. ಎನ್ಐಟಿಇಎಸ್ ತನ್ನ ದೂರಿನಲ್ಲಿ ಟಿಸಿಎಸ್ ನ ವರ್ಗಾವಣೆ ಪದ್ಧತಿಗಳನ್ನು ತನಿಖೆ ಮಾಡಲು ಮತ್ತು ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸುತ್ತಿರುವುದು ಕಂಡುಬಂದರೆ ಟಿಸಿಎಸ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವಾಲಯವನ್ನು ಒತ್ತಾಯಿಸಿದೆ.

SCROLL FOR NEXT