ಮುಂಬೈ: ಟಾಟಾ ಸಮೂಹ ಒಡೆತನದ ಏರ್ ಇಂಡಿಯಾ ಸಂಸ್ಥೆಗೆ ಭಾರತೀಯ ವಿಮಾನಯಾನ ನಿಯಂತ್ರಣ ಸಂಸ್ಥೆ (ಡಿಜಿಸಿಎ)ಶಾಕ್ ನೀಡಿದ್ದು, ದುಬಾರಿ ದಂಡ ಹೇರಿದೆ.
ಹೌದು.. ಅರ್ಹರಲ್ಲದ ಪೈಲಟ್ ಗಳನ್ನು ವಿಮಾನಯಾನ ಸೇವೆಗೆ ಬಳಕೆ ಮಾಡಿಕೊಂಡ ಆರೋಪದ ಮೇರೆಗೆ ಡಿಜಿಸಿಎ ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಗೆ 90 ಲಕ್ಷರೂ ದಂಡ ವಿಧಿಸಿದೆ. ಅರ್ಹತೆ ಹೊಂದಿರದ ಸಿಬ್ಬಂದಿ ಸದಸ್ಯರ ಮೂಲಕ ವಿಮಾನವನ್ನು ನಿರ್ವಹಿಸಿದ್ದಕ್ಕಾಗಿ ಈ ದಂಡವನ್ನು ವಿಧಿಸಲಾಗಿದೆ ಎಂದು ತಿಳಿದುಬಂದಿದೆ.
ಏರ್ ಇಂಡಿಯಾ ವಿಮಾನಯಾನ ಸಂಸ್ಥೆಗೆ 90 ಲಕ್ಷ ರೂ ದಂಡ ಹೇರಿದ್ದು ಮಾತ್ರವಲ್ಲದೇ ಡಿಜಿಸಿಎ ಏರ್ ಇಂಡಿಯಾದ ಡೈರೆಕ್ಟರ್ ಆಪರೇಷನ್ Pankul Mathur ಅವರಿಗೆ 6 ಲಕ್ಷ ರೂಪಾಯಿ ಮತ್ತು ಡೈರೆಕ್ಟರ್ ಟ್ರೈನಿಂಗ್ Manish Vasavada ಅವರಿಗೆ 3 ಲಕ್ಷ ರೂಪಾಯಿ ದಂಡ ವಿಧಿಸಿದೆ. ಜುಲೈ 10 ರಂದು ಸಲ್ಲಿಸಲಾದ ಏರ್ ಇಂಡಿಯಾದ ಸ್ವಯಂಪ್ರೇರಿತ ವರದಿಯ ಆಧಾರದ ಮೇಲೆ ನಿಯಂತ್ರಕ ಸಂಸ್ಥೆ ಈ ಕ್ರಮ ಕೈಗೊಂಡಿದೆ.
ಡಿಜಿಸಿಎ ತನಿಖೆ
ಜುಲೈ 10 ರಂದು ಏರ್ ಇಂಡಿಯಾ ಸ್ವಯಂ ಪ್ರೇರಣೆಯಿಂದ ಡಿಜಿಸಿಎಗೆ ವರದಿ ಸಲ್ಲಿಸಿದ್ದು, ಇದಾದ ನಂತರ ನಿಯಂತ್ರಕ ಸಂಸ್ಥೆ ತನಿಖೆ ನಡೆಸಿತ್ತು. ಈ ವೇಳೆ ಕಂಪನಿಯ ಕೆಲವು ಪೋಸ್ಟ್ ಹೋಲ್ಡರ್‌ಗಳು ಮತ್ತು ಸಿಬ್ಬಂದಿ ಅನೇಕ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದಿದೆ ಮತ್ತು ಭದ್ರತಾ ಅಪಾಯಗಳನ್ನು ಉಂಟುಮಾಡುವ ಲೋಪಗಳು ಕಂಡುಬಂದಿವೆ. ಇದೇ ಕಾರಣಕ್ಕೆ ಏರ್ ಇಂಡಿಯಾ ಸಂಸ್ಥೆಗೆ ಡಿಜಿಸಿಎ ದಂಡ ಹೇರಿದೆ ಎನ್ನಲಾಗಿದೆ.
ಪೈಲಟ್‌ಗಳಿಗೆ ಎಚ್ಚರಿಕೆ
ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸಂಬಂಧಪಟ್ಟ ಪೈಲಟ್‌ಗೆ ಎಚ್ಚರಿಕೆ ನೀಡಲಾಗಿದೆ ಎಂದು ನಿಯಂತ್ರಕರು ತಿಳಿಸಿದ್ದಾರೆ. DGCA ಹೊರಡಿಸಿದ ಹೇಳಿಕೆಯ ಪ್ರಕಾರ, ಏರ್ ಇಂಡಿಯಾ ಲಿಮಿಟೆಡ್ ತರಬೇತಿದಾರರಲ್ಲದ ಲೈನ್ ಕ್ಯಾಪ್ಟನ್ ಮತ್ತು ನಾನ್-ಲೈನ್-ರಿಲೀಸ್ಡ್ ಫಸ್ಟ್ ಆಫೀಸರ್‌ನೊಂದಿಗೆ ವಿಮಾನವನ್ನು ನಿರ್ವಹಿಸಲಾಗಿತು. ನಿಯಂತ್ರಕರ ಪ್ರಕಾರ, ಇದು ಗಂಭೀರ ವಿಷಯವಾಗಿದೆ ಏಕೆಂದರೆ ಇದು ಸುರಕ್ಷತೆಯ ಅಪಾಯಗಳನ್ನು ಉಂಟುಮಾಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.