ಮುಂಬೈ: ಒಂದೆಡೆ ಭಾರತೀಯ ಷೇರುಮಾರುಕಟ್ಟೆ ತನ್ನ ಕುಸಿತ ಮುಂದುವರೆಸಿದ್ದರೆ ಮತ್ತೊಂದೆಡೆ ರೂಪಾಯಿ ಮೌಲ್ಯ ಕೂಡ ಪಾತಾಳಕ್ಕೆ ಕುಸಿಯುತ್ತಿದೆ.
ಹೌದು.. ಇಂದು ಭಾರತೀಯ ರೂಪಾಯಿ ಮೌಲ್ಯ ಮತ್ತೆ ಕುಸಿದಿದ್ದು, ಸಾರ್ವಕಾಲಿಕ ಕಳಪೆ ಮಟ್ಟಕ್ಕೆ ಇಳಿದಿದೆ. ಇಂದು ರೂಪಾಯಿ ಮೌಲ್ಯದಲ್ಲಿ 4 ಪೈಸೆಯಷ್ಟು ಕುಸಿಯುವ ಮೂಲಕ ಸಾರ್ವಕಾಲಿಕ ಕನಿಷ್ಠ ಮೌಲ್ಯಕ್ಕೆ ಕುಸಿದಿದೆ.
ಇಂದು ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 4 ಪೈಸೆಯಷ್ಟು ಕುಸಿದಿದ್ದು, ಸಾರ್ವಕಾಲಿಕ ಕನಿಷ್ಠ ಮಟ್ಟ 84.87ರೂ ಗೆ ಇಳಿಕೆಯಾಗಿದೆ. ಋಣಾತ್ಮಕ ದೇಶೀಯ ಇಕ್ವಿಟಿ ಮಾರುಕಟ್ಟೆಗಳು, ವಿದೇಶಿ ನಿಧಿಗಳ ಹೊರಹರಿವು ಮತ್ತು ಕಚ್ಚಾ ತೈಲ ಬೆಲೆಗಳ ಏರಿಕೆ ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣ ಎಂದು ಹೇಳಲಾಗಿದೆ.
ಇಂದು ಇಂಟರ್‌ಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ರೂಪಾಯಿಯು 84.85 ನಲ್ಲಿ ಪ್ರಾರಂಭವಾಯಿತು ಮತ್ತು ಇಂಟ್ರಾ-ಡೇ ವಹಿವಾಟಿನ ಸಮಯದಲ್ಲಿ ಗ್ರೀನ್‌ಬ್ಯಾಕ್ ವಿರುದ್ಧ 84.88 ರ ಅತ್ಯಂತ ಕಡಿಮೆ ಮಟ್ಟವನ್ನು ಮುಟ್ಟಿತು.
ಅಂತಿಮವಾಗಿ ದಿನದ ವಹಿವಾಟು ಅಂತ್ಯಕ್ಕೆ 4 ಪೈಸೆ ಇಳಿಕೆಯೊಂದಿಗೆ ಡಾಲರ್ ವಿರುದ್ಧ 84.87 (ತಾತ್ಕಾಲಿಕ) ಸಾರ್ವಕಾಲಿಕ ಕಡಿಮೆ ಮೌಲ್ಯದೊಂದಿಗೆ ವಹಿವಾಟು ಅಂತ್ಯಗೊಳಿಸಿದೆ. ಬುಧವಾರ ರೂಪಾಯಿ ಮೌಲ್ಯ 2 ಪೈಸೆ ಏರಿಕೆಯಾಗಿ 84.83 ಕ್ಕೆ ಸ್ಥಿರವಾಗಿತ್ತು.
ಏತನ್ಮಧ್ಯೆ ಭಾರತೀಯ ಕರೆನ್ಸಿ ಮೌಲ್ಯ ಕುಸಿತ, ಡಾಲರ್ ಏರಿಕೆ ಮತ್ತು ಷೇರು ಸೂಚ್ಯಂಕ ಇಳಿಕೆಯ ಹೊರತಾಗಿಯೂ ಭಾರತೀಯ ಹೂಡಿಕೆದಾರರು ನಾಳೆ ಬಿಡುಗಡೆಯಾಗುವ ದೇಶೀಯ ಹಣದುಬ್ಬರ ದತ್ತಾಂಶದಿಂದ ಸೂಚನೆಗಳಿಗಾಗಿ ಕಾಯುತ್ತಿದ್ದಾರೆ ಎಂದು ವಿದೇಶೀ ವಿನಿಮಯ ವ್ಯಾಪಾರಿಗಳು ಹೇಳಿದ್ದಾರೆ.