ಮುಂಬೈ: ಅಲ್ಪ ಪ್ರಮಾಣದ ಕುಸಿತದ ಮೂಲಕ ಭಾರತೀಯ ಷೇರುಮಾರುಕಟ್ಟೆ ವರ್ಷದ ಕೊನೆಯ ದಿನದ ವಹಿವಾಟು ಅಂತ್ಯಗೊಳಿಸಿದ್ದು, ಒಟ್ಟಾರೆ ಈ ವರ್ಷ ಬಿಎಸ್ ಇ ಸೆನ್ಸೆಕ್ಸ್ ಶೇ.9ರಷ್ಟು ಏರಿಕೆ ಕಂಡಿದೆ.
ಹೌದು.. 2024ರ ಅಂತಿಮ ದಿನದಂದು ಭಾರತೀಯ ಷೇರುಮಾರುಕಟ್ಟೆ ಅತ್ಯಲ್ಪ ಪ್ರಮಾಣದ ಕುಸಿತ ಕಂಡಿದ್ದು, ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಸೂಚ್ಯಂಕಗಳು ರೆಡ್ ನಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಭಾರತೀಯ ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಶೇ.0.14ರಷ್ಟು ಇಳಿಕೆ ಕಂಡಿದ್ದರೆ, ನಿಫ್ಟಿ ಶೇ.0.00042ರಷ್ಟು ಕುಸಿತವಾಗಿದೆ. ಸೆನ್ಸೆಕ್ಸ್ ಇಂದು 109.12 ಅಂಕಗಳ ಇಳಿಕೆಯೊಂದಿಗೆ 78,139.01 ಅಂಕಗಳಿಗೆ ಕುಸಿದಿದ್ದರೆ, ನಿಫ್ಟಿ 0.100 ಅಂಕಗಳ ಇಳಿಕೆಯೊಂದಿಗೆ 23,644.80 ಅಂಕಗಳಿಗೆ ಕುಸಿತವಾಗಿ ದಿನದ ಮತ್ತು ವರ್ಷಾಂತ್ಯದ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಬ್ಯಾಂಕಿಂಗ್ ಮತ್ತು ಐಟಿ ವಲಯದ ಷೇರುಗಳ ಮೌಲ್ಯ ಕುಸಿದಿದೆ.
ಯಾರಿಗೆ ಲಾಭ? ಯಾರಿಗೆ ನಷ್ಟ?
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಕೋಟಕ್ ಮಹೀಂದ್ರಾ ಬ್ಯಾಂಕ್, ಐಟಿಸಿ, ಅಲ್ಟ್ರಾಟೆಕ್ ಸಿಮೆಂಟ್, ಟಾಟಾ ಮೋಟಾರ್ಸ್, ಟಾಟಾ ಸ್ಟೀಲ್, ಸೆಬಿ, ಅದಾನಿ ಪೋರ್ಟ್ಸ್, ಎಲ್ & ಟಿ, ಎನ್ಟಿಪಿಸಿ, ಸನ್ ಫಾರ್ಮಾ, ಮಾರುತಿ ಮತ್ತು ನೆಸ್ಲೆ ಇಂಡಿಯಾ ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿದೆ. ಅಂತೆಯೇ ಟೆಕ್ ಮಹೀಂದ್ರ, ಜೊಮ್ಯಾಟೋ, ಟಿಸಿಎಸ್, ಇನ್ಫೋಸಿಸ್, ಬಜಾಜ್ ಫೈನಾನ್ಸ್, ಐಸಿಐಸಿಐ ಬ್ಯಾಂಕ್, ಹೆಚ್ ಸಿಎಲ್ ಟೆಕ್, ಎಕ್ಸಿಸ್ ಬ್ಯಾಂಕ್ ಮತ್ತು ಇಂಡಸ್ ಇಂಡ್ ಬ್ಯಾಂಕ್ ಸಂಸ್ಥೆಯ ಷೇರುಗಳು ನಷ್ಟ ಅನುಭವಿಸಿವೆ.
2024ರಲ್ಲಿ ಶೇ.9ರಷ್ಟು ಏರಿಕೆ ಕಂಡ SENSEX
ಭಾರತೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಕಳೆದೊಂದು ವರ್ಷದಲ್ಲಿ ಸರಾಸರಿ 9ರಷ್ಟು ಏರಿಕೆ ಕಂಡಿದ್ದು, ಅಂದರೆ 2024ರಲ್ಲಿ ಸೆನ್ಸೆಕ್ಸ್ ಬರೊಬ್ಬರಿ ಶೇ.8.18% ರಷ್ಟು ಮತ್ತು ನಿಫ್ಟಿ 8.76% ಏರಿಕೆ ಕಂಡಿದೆ. ಅಂತೆಯೇ 2024ರ ಸೆಪ್ಟೆಂಬರ್ 27 ರಂದು ಸೆನ್ಸೆಕ್ಸ್ ದಾಖಲೆಯ ಗರಿಷ್ಠ ಮಟ್ಟ ಅಂದರೆ 85,978ಕ್ಕೆ ತಲುಪಿತ್ತು.
ಅಂತೆಯೇ ಅದೇ ದಿನ ನಿಫ್ಟಿ ಕೂಡ 26,277 ರ ಗರಿಷ್ಠ ಮಟ್ಟವನ್ನು ತಲುಪಿ ದಾಖಲೆ ಬರೆದಿತ್ತು. ಇದಾದ ಬಳಿಕ ಮಾರುಕಟ್ಟೆ ಕುಸಿತದತ್ತ ಸಾಗಿ ಪ್ರಸ್ತುತ ಸೆನ್ಸೆಕ್ಸ್ 78,139.01 ಅಂಕಗಳು ಮತ್ತು ನಿಫ್ಟಿ 23,644.80 ಅಂಕಗಳಲ್ಲಿ ವಹಿವಾಟು ನಡೆಸುತ್ತಿವೆ.
2024ರ ಜನವರಿ 1ರಂದು ಸೆನ್ಸೆಕ್ಸ್ 72,271.94 ಅಂಕಗಳೊಂದಿಗೆ ವರ್ಷದ ವಹಿವಾಟು ಆರಂಭಿಸಿತ್ತು. ಇದೀಗ 5,898.75 ಅಂಕಗಳು ಅಂದರೆ ಶೇ.8.16 ರಷ್ಟು ಏರಿಕೆಯೊಂದಿಗೆ 2025ಕ್ಕೆ ಕಾಲಿಟ್ಟಿದೆ. ಅಂತೆಯೇ ನಿಫ್ಟಿ ಕೂಡ 2024ರ ಜನವರಿ 1ರಂದು 21, 741.90 ಅಂಕಗಳೊಂದಿಗೆ 2024ರ ವರ್ಷದ ವಹಿವಾಟು ಆರಂಭಿಸಿತ್ತು. ಇದೀಗ 1,913.4 ಅಂಕಗಳ ಏರಿಕೆಯೊಂದಿಗೆ ಶೇ.8.80ರಷ್ಟು ಏರಿಕೆಯೊಂದಿಗೆ ನೂತನ ವರ್ಷಕ್ಕೆ ಕಾಲಿಟ್ಟಿದೆ.