ಮುಂಬೈ: ಧೀಮಂತ ಉದ್ಯಮಿ ರತನ್ ಟಾಟಾ ಅವರು ಫೋರ್ಡ್‌ನಿಂದ ಅವಮಾನಕ್ಕೊಳಗಾದ ನಂತರ ಎರಡು ಐಕಾನಿಕ್ ಬ್ರ್ಯಾಂಡ್‌ಗಳಾದ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಕಂಪನಿಗಳನ್ನು ಖರೀದಿಸುವ ಮೂಲಕ ತಿರುಗೇಟು ನೀಡಿದ್ದರು.
ಟಾಟಾ ಗ್ರೂಪ್ ಅನ್ನು ಎಲ್ಲರೂ ನಿಬ್ಬೆರಗಾಗುವಂತೆ ಬೆಳೆಸಿದ ರತನ್ ಟಾಟಾ ಅವರು 1998 ರಲ್ಲಿ ತಮ್ಮ ಕನಸಿನ ಯೋಜನೆಯಾದ ಟಾಟಾ ಇಂಡಿಕಾವನ್ನು ಪ್ರಾರಂಭಿಸಿದರು. ಇದು ಡೀಸೆಲ್ ಎಂಜಿನ್ ಹೊಂದಿದ ಭಾರತದ ಮೊದಲ ಹ್ಯಾಚ್‌ಬ್ಯಾಕ್ ಎಂಬ ಗೌರವಕ್ಕೆ ಪಾತ್ರವಾಗಿದೆ. ಆದರೆ ಇದರ ಮಾರಾಟವು ಆರಂಭದಲ್ಲಿ ನಿಧಾನವಾಗಿತ್ತು. ಹೀಗಾಗಿ ಟಾಟಾ ಮೋಟಾರ್ಸ್ ತನ್ನ ಹೊಸ ಪ್ರಯಾಣಿಕ ಕಾರು ವಿಭಾಗವನ್ನು ಮಾರಾಟ ಮಾಡಲು ನಿರ್ಧರಿಸಿತು.
ರತನ್ ಟಾಟಾ ಮತ್ತು ಅವರ ತಂಡ 1999 ರಲ್ಲಿ ಅಮೆರಿಕದ ಆಟೋ ದೈತ್ಯ ಫೋರ್ಡ್ ಕಂಪನಿಯ ಅಧಿಕಾರಿಗಳನ್ನು ಮಾತುಕತೆಗಾಗಿ ಬಾಂಬೆ ಹೌಸ್‌ಗೆ ಆಹ್ವಾನಿಸಿತ್ತು.
ಟಾಟಾ ಪ್ರಧಾನ ಕಛೇರಿಯಲ್ಲಿ ನಡೆದ ಸಭೆಯಲ್ಲಿ, ಅಮೆರಿಕನ್ ಕಂಪನಿಯು, ನಿಮಗೆ ಏನೂ ಗೊತ್ತಿಲ್ಲ. ಆದರೂ ನೀವ್ಯಾಕೆ ಪ್ರಯಾಣಿಕ ಕಾರು ಮಾರುಕಟ್ಟೆಗೆ ಪ್ರವೇಶಿಸಿದ್ದೀರಿ ಎಂದು ಪ್ರಶ್ನಿಸಿತ್ತು. ಈ ಸಂದರ್ಭದಲ್ಲಿ ನಾವು ನಿಮಗೆ ಸಹಾಯ ಮಾಡುವ ಸಲುವಾಗಿ ಪ್ರಯಾಣಿಕ ಕಾರು ವಿಭಾಗ ಖರೀದಿಸುವೆವು ಎಂದು ಅಹಂಕಾರದ ಮಾತುಗಳನ್ನಾಡುವ ಮೂಲಕ ರತನ್ ಟಾಟಾ ಅವರನ್ನು ಅವಮಾನಿಸಲಾಗಿತ್ತು ಎಂದು ಸಭೆಯಲ್ಲಿ ಭಾಗವಹಿಸಿದ್ದ ವ್ಯಕ್ತಿಯೊಬ್ಬರು ಹೇಳಿದ್ದಾರೆ.
ರತನ್ ಟಾಟಾ ತಕ್ಷಣ ಆ ಡೀಲ್‌ಗೆ ಗುಡ್‌ಬೈ ಹೇಳಿದರು. ಫೋರ್ಡ್ ಕಂಪನಿಯ ಆಲೋಚನೆ ತಪ್ಪು ಎಂದು ತೋರಿಸುವೆ ಎಂದು ದೃಢ ನಿರ್ಧಾರ ಕೈಗೊಂಡರು. ಅಂದಿನಿಂದ ಟಾಟಾ ಬ್ರ್ಯಾಂಡ್ ಕಟ್ಟುವ ಕುರಿತು ವಿಶೇಷ ಛಲ ಹೊಂದಿದ್ದರು.
ಒಂಬತ್ತು ವರ್ಷಗಳ ನಂತರ, 2008 ರ ಫೋರ್ಡ್ ಕಂಪನಿಯು ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸುಳಿಗೆ ಸಿಲುಕಿ ದಿವಾಳಿಯಂಚಿಗೆ ತಲುಪಿತ್ತು. ಈ ಸಮಯದಲ್ಲಿ ರತನ್ ಟಾಟಾರಿಗೆ ಇದು ಅವಕಾಶದಂತೆ ಕಾಣಿಸಿತ್ತು. ವಾಹನೋದ್ಯಮದಲ್ಲಿ ಟಾಟಾ ಮೋಟಾರ್ಸ್ ದೊಡ್ಡ ಕಂಪನಿಯಾಗಿ ಬೆಳೆದಿತ್ತು. ಸುಮಾರು 230 ಕೋಟಿ ಡಾಲರ್‌ಗೆ ಫೋರ್ಡ್‌ಕಂಪನಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ಒಂದು ಸಮಯದಲ್ಲಿ ಅವಮಾನ ಮಾಡಿದ ಕಂಪನಿಯ ಪ್ರಮುಖ ಕಾರು ವಿಭಾಗವನ್ನೇ ತನ್ನದಾಗಿಸಿಕೊಂಡ ಸಾಧನೆಯ ಕಥೆಯಾಗಿ ಎಲ್ಲೆಡೆ ಇದು ಪ್ರಚಾರ ಪಡೆಯಿತು ಮತ್ತು ಫೋರ್ಡ್ ಅಧ್ಯಕ್ಷ ಬಿಲ್ ಫೋರ್ಡ್ ಟಾಟಾ ಅವರಿಗೆ ಧನ್ಯವಾದ ಅರ್ಪಿಸಿದರು.