ನವದೆಹಲಿ: ದೆಹಲಿ ಮೂಲದ ಡೆವಲಪರ್ ಓರ್ವ JioHotstar.com ಡೊಮೇನ್ ನ್ನು ಖರೀದಿಸಿದ್ದು, ರಿಲಾಯನ್ಸ್ ಸಂಸ್ಥೆಗೆ ಈ ಡೊಮೇನ್ ನ್ನು ಬಿಟ್ಟುಕೊಡಬೇಕೆಂದಿದ್ದರೆ, ತನ್ನ ಬೇಡಿಕೆಯನ್ನು ಪರಿಗಣಿಸುವಂತೆ ಮನವಿ ಮಾಡಿದ್ದಾರೆ.
ಜಿಯೋ ಹಾಗೂ ಡಿಸ್ನಿ+ ಹಾಟ್‌ಸ್ಟಾರ್ ವಿಲೀನಗೊಳ್ಳುವ ಹಿನ್ನೆಲೆಯಲ್ಲಿ ದೆಹಲಿ ಮೂಲದ ಡೆವಲಪರ್ ಓರ್ವ JioHotstar.com ಡೊಮೇನ್ ನ್ನು ತಾನು ಖರೀದಿಸಿದ್ದಾನೆ.
ಡೆವಲಪರ್ ತಾನು ಖರೀದಿಸಿರುವ JioHotstar.com ನ ಮುಖಪುಟದಲ್ಲಿ ತನ್ನ ಬೇಡಿಕೆಯನ್ನು ರಿಲಾಯನ್ಸ್ ಸಂಸ್ಥೆಯ ಮುಂದಿಟ್ಟಿದ್ದಾರೆ.
ಜಿಯೋ ಈ ಹಿಂದೆ ಮ್ಯೂಸಿಕ್ ಸ್ಟ್ರೀಮಿಂಗ್ ಸೇವೆಗಳನ್ನು ಒದಗಿಸುವ ಸಾವನ್ ಎಂಬ ಸಂಸ್ಥೆಯನ್ನು ತನ್ನಲ್ಲಿ ವಿಲೀನಗೊಳಿಸಿದಾಗ ಅದನ್ನು ಜಿಯೋ ಸಾವನ್ ಎಂದು ರೀಬ್ರಾಂಡ್ ಮಾಡಿದರು. ಅದೇ ಉದಾಹರಣೆಯನ್ನಿಟ್ಟುಕೊಂಡು ನೋಡುವುದಾದರೆ, ಜಿಯೋ ಸಂಸ್ಥೆ ಹಾಟ್ಸ್ಟಾರ್ ನ್ನು ವಿಲೀನಗೊಳಿಸಿಕೊಂಡರೆ, ಅದನ್ನು JioHotstar.com ಎಂದು ಮರುನಾಮಕರಣ ಮಾಡುತ್ತಾರೆ ಎಂಬ ನಿರೀಕ್ಷೆ ಇದೆ ಆದ್ದರಿಂದ ನಾನು ಈ ಡೊಮೇನ್ ಲಭ್ಯವಿದೆಯೇ? ಎಂದು ಪರಿಶೀಲಿಸಿದೆ. ಅಚ್ಚರಿಯೆಂಬಂತೆ ಡೊಮೇನ್ ಲಭ್ಯವಿದ್ದ ಕಾರಣ ಖರೀದಿಸಿದೆ. ಇದನ್ನು ಮಾರಾಟ ಮಾಡುವ ಮೂಲಕ ನಾನು ಕೇಂಬ್ರಿಡ್ಜ್ ವಿವಿಯಲ್ಲಿ ಉನ್ನತ ಶಿಕ್ಷಣ ಪಡೆಯುವ ನನ್ನ ಕನಸನ್ನು ನನಸು ಮಾಡಿಕೊಳ್ಳಬಹುದೆಂದುಕೊಂಡಿದ್ದೇನೆ ಎಂದು ಟೆಕ್ಕಿ ಹೇಳಿದ್ದಾರೆ.
ನನ್ನ ಯೋಜನೆಯನ್ನು ಕೆಲವು ವರ್ಷಗಳ ಹಿಂದೆ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಆಕ್ಸಿಲರೇಟ್ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಯಿತು. ಅಲ್ಲಿ ಅಧ್ಯಯನ ಮಾಡಲು ಬಯಸಿದ್ದೆಯಾದರೂ, ಹಣಕಾಸಿನ ನಿರ್ಬಂಧಗಳಿಂದಾಗಿ ಸಾಧ್ಯವಾಗಲಿಲ್ಲ ಎಂದು ಡೆವಲಪರ್ ಹೇಳಿಕೊಂಡಿದ್ದಾರೆ.
ರಿಲಾಯನ್ಸ್ ಸಂಸ್ಥೆ 1,01,86,497.15 ರೂಪಾಯಿಗಳನ್ನು ಅಥವಾ (£ 93345) ನೀಡಿದರೆ, ತಾನು ಡೊಮೇನ್ ಬಿಟ್ಟುಕೊಡುವುದಾಗಿ ಡೆವಲಪರ್ ತಿಳಿಸಿದ್ದಾನೆ. ಆದರೆ ಇದಕ್ಕೆ ರಿಲಾಯನ್ಸ್ ಸಂಸ್ಥೆ ನಿರಾಕರಿಸಿದೆ.
ರಿಲಾಯನ್ಸ್ ಸಂಸ್ಥೆ ಟೆಕ್ಕಿಯ ಕ್ರಮದ ವಿರುದ್ಧ ಕಾನೂನು ಮೊರೆ ಹೋಗುವುದಾಗಿ ತಿಳಿಸಿದೆ. ಡೆವಲಪರ್, ಡೊಮೇನ್ ನ್ನು ಕಳೆದುಕೊಳ್ಳುವ ಸನ್ನಿಹಿತ ಅಪಾಯವನ್ನು ಸಹ ಪ್ರಸ್ತಾಪಿಸಿದ್ದಾರೆ. ಮತ್ತು ಕಾನೂನು ಸಹಾಯಕ್ಕಾಗಿ ಮನವಿ ಮಾಡಿದ್ದಾರೆ. ತಮ್ಮ ಮುಂದಿನ ಕ್ರಮಗಳ ಬಗ್ಗೆ ಅನಿಶ್ಚಿತತೆ ಇದೆ ಎಂದು ಹೇಳಿದ್ದಾರೆ.